ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್ ಹಾಗೂ ಕ್ಯಾನ್ಸರ್ ಸೆಂಟರ್‌ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಸ್ಥಾಪನೆ ಮಾಡುವ ಗುರಿ ಹೊಂದಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
ಮಂಗಳವಾರ ಕೆಎಂಸಿಆರ್‌ಐನ ಗೋಲ್ಡನ್ ಜುಬ್ಲಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೈಸೂರು, ಕೊಪ್ಪಳ ಹಾಗೂ ಕಲ್ಬುರ್ಗಿ ಜಿಲ್ಲೆಯ ಸ್ಥಾಪಿಸಲಾಗಿರುವ ಮಲ್ಟಿ ಸ್ಕೀಲಿಂಗ್ ಸೆಂಟರ್ ನಂತೆ ಪ್ರತಿ ಜಿಲ್ಲೆಯಲ್ಲಿಯೂ ಮಲ್ಟಿ ಸ್ಕೀಲಿಂಗ್ ಸೆಂಟರ್ ಸ್ಥಾಪನೆ ಮಾಡಲಾಗುವುದು. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ ಅಥವಾ ಬೆಳಗಾವಿಯಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲಾಗುವುದು. ಕಲಿಕೆ ಜೊತೆ ಕೌಶಲ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. 800 ಪದವಿ ಹಾಗೂ 750 ಸ್ನಾತಕೋತ್ತರ ಪದವಿ ಮೆಡಿಕಲ್ ಸೀಟ್ ನೀಡುವಂತೆ ರಾಷ್ಟ್ರೀಯ ಮೆಡಿಕಲ್ ಆಯೋಗಕ್ಕೆ ಮನವಿ ಮಾಡಲಾಗಿದೆ. ಬಜೆಟ್‌ನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗಿದೆ ಎಂದರು.
ಸುಮಾರು ರೂ.6 ಕೋಟಿ ವೆಚ್ಚದಲ್ಲಿ ಆಡಿಟೋರಿಯಂ ನಿರ್ಮಿಸಲಾಗಿದೆ. ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಜೀವಾಮೃತ ತಾಯಿ ಹಾಲು ಭಂಡಾರ ತೆರೆಯಲಾಗಿದೆ. ರೂ.90 ಲಕ್ಷದಲ್ಲಿ 300 ಆಸನವುಳ್ಳ ಮಲ್ಟಿ ಫಂಕ್ಷನ ಹಾಲ್ ಸ್ಥಾಪಿಸಲಾಗಿದೆ. ಕೃತಕ ಕಾಲು ಜೋಡಣೆ ಚಿಕಿತ್ಸಾ ಘಟಕ ತೆರೆಯಲಾಗಿದೆ. ನರ್ಸಿಂಗ್ ಕಾಲೇಜು ಸಾಂಸ್ಕೃತಿಕ ಸಭಾಂಗಣವನ್ನು ರೂ.75 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ರೂ.5 ಕೋಟಿ ಮೊತ್ತದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ವಸತಿ ನಿಲಯಗಳ ನವೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ರೂ.5 ಕೋಟಿ ವೆಚ್ಚದಲ್ಲಿ ಅಗ್ನಿ ಅವಘಡ ಸುರಕ್ಷತಾ ವ್ಯವಸ್ಥೆ ಅಳವಡಿಸಲಾಗುತ್ತಿದೆ. ರೂ.25 ಮೊತ್ತದಲ್ಲಿ ಹೊರರೋಗಿ ವಿಭಾಗದಲ್ಲಿ ನೋಂದಣಿ ಹೆಚ್ಚುವರಿ ಕೌಂಟರ್‌ಗಳ ಸ್ಥಾಪನೆ ಮಾಡಲಾಗುವುದು. ರೂ. 60 ಲಕ್ಷ ವೆಚ್ಚದಲ್ಲಿ ಹೊಸ ಮೂರು ಲಿಫ್ಟ್ಗಳ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಮುಖ್ಯ ಔಷಧಿ ಮಳಿಗೆ ಕಟ್ಟಡ ವಿಸ್ತರಣೆ ಹಾಗೂ ದುರಸ್ತಿ ಕಾಮಗಾರಿಯನ್ನು ರೂ.90 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಲಿಂಗರಾಜ್ ಪಾಟೀಲ್ ಅವರ ದೇಣಿಗೆ ಹಣ ರೂ.1.17 ಕೋಟಿ ವೆಚ್ಚದಲ್ಲಿ ಕೃತಕ ಗರ್ಭಧಾರಣೆ ಕೇಂದ್ರವನ್ನು ತೆರೆಯಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಅಧ್ಯಕ್ಷರಾದ ಸೈಯದ್ ಅಜೀಮಪೀರ್ ಎಸ್.ಖಾದ್ರಿ, ಕೆಎಂಸಿಆರ್‌ಐನ ನಿರ್ದೇಶಕರಾದ ಡಾ. ಎಸ್.ಎಫ್. ಕಮ್ಮಾರ, ವೈದ್ಯಕೀಯ ಅಧೀಕ್ಷಕರಾದ ಡಾ. ಈಶ್ವರ ಹಸಬಿ, ಪಿಎಂಎಸ್‌ಕೆವೈ ಸೂಪರಿಂಟೆಂಡೆಂಟ್ ರಾಜಶೇಖರ, ಪ್ರಾಚಾರ್ಯ ಗುರುಶಾಂತಪ್ಪ ಯಲಗಚ್ಚಿನ, ಡಾ. ರಾಜಶೇಖರ ದ್ಯಾಬೇರಿ ಮುಂತಾದವರು ಉಪಸ್ಥಿತರಿದ್ದರು.
ಬೆಂಗಳೂರು ಹೊರತುಪಡಿಸಿದರೆ ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ಹೆಚ್ಚಿನ ಜನರು ಚಿಕಿತ್ಸೆ ಪಡೆಯುತ್ತಾರೆ. ಕೆಎಂಸಿಆರ್‌ಐನಲ್ಲಿ ಕಿತ್ತೂರು ಕರ್ನಾಟಕ ಭಾಗದ ಜನರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಗುಣಮಟ್ಟದ ಔಷಧಿಗಳನ್ನು ಜನರಿಗೆ ಒದಗಿಸುವುದು ಸರ್ಕಾರದ ಮೂಲ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಔಷಧಿಗಳ ಕೊರತೆ ಆಗದಂತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ವರ್ಷದಲ್ಲಿ 35 ಕಿಡ್ನಿ ಟ್ರಾನ್ಸಪ್ಲಾಂಟ್ ಮಾಡಲಾಗಿದೆ.
– ಡಾ. ಶರಣಪ್ರಕಾಶ ಪಾಟೀಲ.
ಸಚಿವರು.