ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮೀಪದ ಜಕ್ಕಲಿ ಗ್ರಾಮ ಪಂಚಾಯಿತಿಯ ವಾರ್ಡ್ ಸಂಖ್ಯೆ 1ರ ಮತಗಟ್ಟೆ ಸಂಖ್ಯೆ-155ರಲ್ಲಿ ಮತದಾನದ ಹಕ್ಕು ಚಲಾಯಿಸಿದ ಗ್ರಾಮದ ಹಿರಿಯಜ್ಜಿ ಬಸಲಿಂಗಮ್ಮ ಶಿವಪ್ಪ ಪಟ್ಟಣಶೆಟ್ಟಿ ಎಲ್ಲರ ಗಮನ ಸೆಳೆದರಲ್ಲದೆ, ಮತದಾನ ಪ್ರಕ್ರಿಯೆಯಿಂದ ದೂರವುಳಿದ ಅನೇಕ ಪ್ರಜೆಗಳಿಗೆ ಮಾದರಿಯೂ ಆದರು.
ಮನೆಯಿಂದಲೇ ಮತದಾನ ಮಾಡುವ ಅವಕಾಶವಿದ್ದರೂ ಕೂಡ ಮತಗಟ್ಟೆಗೆ ಉತ್ಸಾಹದಿಂದ ಆಗಮಿಸಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಯುವ ಮತದಾರರಿಗೆ ಸ್ಪೂರ್ತಿ ತುಂಬಿದ ಈ ಹಿರಿಯಜ್ಜಿ ಎಲ್ಲರಿಗೂ ಪ್ರೇರೇಪಣೆ ಮೂಡಿಸಿದರು.
ಚುನಾವಣಾ ಆಯೋಗ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಿದ್ದರೂ ಆ ಸೌಲಭ್ಯ ಬಳಸಿಕೊಳ್ಳದೆ ತಮಗೆ ನಡೆಯಲು ಕಷ್ಟವಾಗುತ್ತಿದ್ದರೂ ಮನೆಯಿಂದ ಮತಗಟ್ಟೆಯಿರುವ ಸ್ಥಳಕ್ಕೆ ಕಾರ್ ಮೂಲಕ ತೆರಳಿ, ಮತಗಟ್ಟೆ ಆವರಣದಲ್ಲಿ ನಡೆದುಕೊಂಡೇ ಬಂದು ಮತ ಚಲಾಯಿಸುವ ಮೂಲಕ ಪ್ರಶಂಸೆಗೆ ಪಾತ್ರರಾದರು.
ಅವರ 75 ವರ್ಷದ ಏಕೈಕ ಪುತ್ರ ವೀರಪ್ಪ ಹಾಗೂ ಮೊಮ್ಮಗ ಮಲ್ಲಪ್ಪ, ಸೊಸೆ, ಮೊಮ್ಮಗಳ ಜೊತೆ ಕುಟುಂಬ ಪರಿವಾರದೊಡನೆ ಗ್ರಾಮ ಪಂಚಾಯಿತಿ ಮತಗಟ್ಟೆಗೆ ಸಂಜೆ 5 ಗಂಟೆಗೆ ಬಂದು ಮತ ಚಲಾವಣೆ ಮಾಡಿದರು. ಮತದಾನ ಮಾಡಿದ ಬಳಿಕ ಮಾತನಾಡಿದ ಬಸಲಿಂಗಮ್ಮ, ಮತದಾನ ನಮ್ಮ ಹಕ್ಕು.
ಮನೆಯಲ್ಲಿ ಮತದಾನ ಮಾಡಿದರೆ ಅದರ ಮಹತ್ವ ತಿಳಿಯುವುದಿಲ್ಲ. ಜನರೂ ಭೇಟಿಯಾಗುವುದಿಲ್ಲ. ಅದಕ್ಕೆ ಮತಗಟ್ಟೆಗೆ ಬಂದಿದ್ದೇನೆ. ಇಲ್ಲಿ ಎಲ್ಲರೂ ಭೇಟಿಯಾಗುತ್ತಾರೆ. ಖುದ್ದು ಮತಗಟ್ಟೆಯಲ್ಲಿ ಮತ ಚಲಾಯಿಸಿದರೆ ಮನಸ್ಸಿಗೆ ಖುಷಿ ಎಂದು ಹೇಳಿದರು.
ಶತಾಯುಷಿ ಬಸಲಿಂಗಮ್ಮ ಮತಗಟ್ಟೆಯಲ್ಲಿ ವಯಸ್ಸನ್ನು ಧಿಕ್ಕರಿಸಿ ಮತಗಟ್ಟೆಗೆ ಮತ ಚಲಾಯಿಸಲು ಬಂದಾಗ ಚುನಾವಣಾಧಿಕಾರಿಗಳ ಮತ್ತು ಸಿಬ್ಬಂದಿಯರ ಗೌರವಕ್ಕೆ ಪಾತ್ರರಾದರು. ಓಟು ಹಾಕಿದ ಬಳಿಕ ಬಸಲಿಂಗಮ್ಮ ತನ್ನ ಶಾಯಿಯ ಬೆರಳನ್ನು ತೋರಿಸುತ್ತಾ ಮತಗಟ್ಟೆಯ ಹೊರಗೆ ಫೋಟೋಗಳಿಗೆ ಪೋಸ್ ಕೊಟ್ಟು ಈ ವಯಸ್ಸಿನಲ್ಲಿ ಮತದಾನ ಮಾಡಲು ನನಗೆ ತುಂಬಾ ಸಂತೋಷವಾಗುತ್ತದೆ. ಇಂದಿನವರೆಗೂ ಇದು ಮುಂದುವರೆದಿದೆ. ಮತ ಹಾಕುವುದೆಂದರೆ ನನಗೆ ಎಲ್ಲಿಲ್ಲದ ಖುಷಿ. ಜೀವನದ ಕೊನೆಯುಸಿರು ಇರುವವರೆಗೂ ನನ್ನ ಹಕ್ಕನ್ನು ಚಲಾಯಿಸುವೆ ಎಂದರು.