HomeGadag Newsಪ್ರಯತ್ನದ ನಂತರವೂ ಕಾಣದ ದಾರಿ

ಪ್ರಯತ್ನದ ನಂತರವೂ ಕಾಣದ ದಾರಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸರಕಾರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅದಕ್ಕಾಗಿ ಸತತ ಪರೀಕ್ಷೆಗಳನ್ನು ಸಹ ಆಯೋಜಿಸುತ್ತಿದ್ದು, ಕಳೆದ ಜನವರಿ 25ರಂದು ನಡೆಸಿದ ವಿಭಾಗಮಟ್ಟದ ಪೂರ್ವಭಾವಿ ಪರೀಕ್ಷೆಯಲ್ಲಿ ಶಿರಹಟ್ಟಿ ಮತ್ತು ಲಕ್ಮೇಶ್ವರ ತಾಲೂಕುಗಳಲ್ಲಿ ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.

ಶಿರಹಟ್ಟಿಯ ಬಿಇಓ ನೀಡಿದ ಅಂಕಿ-ಅಂಶದ ಪ್ರಕಾರ, ಶಿರಹಟ್ಟಿ ಮತ್ತು ಲಕ್ಮೇಶ್ವರ ತಾಲೂಕಿನಲ್ಲಿ 10ನೇ ತರಗತಿಗೆ ಸರಕಾರಿ ಶಾಲೆಗಳ ಪೈಕಿ 1446 ವಿದ್ಯಾರ್ಥಿಗಳು ವಿಭಾಗ ಮಟ್ಟದ ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 1224 ವಿದ್ಯಾರ್ಥಿಗಳು ಉತ್ತೀರ್ಣ ಮತ್ತು 222 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಅನುದಾನಿತ ಶಾಲೆಗಳ ಪೈಕಿ 811 ವಿದ್ಯಾರ್ಥಿಗಳಲ್ಲಿ 670 ವಿದ್ಯಾರ್ಥಿಗಳು ಉತ್ತೀರ್ಣ, 141 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಅನುದಾನರಹಿತ ಶಾಲೆಗಳ ಪೈಕಿ 398 ವಿದ್ಯಾರ್ಥಿಗಳಲ್ಲಿ 350 ವಿದ್ಯಾರ್ಥಿಗಳು ಉತ್ತೀರ್ಣ, 48 ವಿದ್ಯಾರ್ಥಿಗಳು ಅನುತ್ತೀರ್ಣ ಹೀಗೆ ಒಟ್ಟು 2800 ವಿದ್ಯಾರ್ಥಿಗಳಲ್ಲಿ 2655 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 2244 ವಿದ್ಯಾರ್ಥಿಗಳು ಉತ್ತೀರ್ಣ ಹಾಗೂ 411 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇದರಲ್ಲಿ ಕೆಲವು ಪ್ರೌಢಶಾಲೆಗಳಲ್ಲಿ ಶೇಕಡಾವಾರು ಹೆಚ್ಚಿಗೆ ಇದ್ದು, ಇನ್ನೂ ಕೆಲವು ಕಡೆಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಆಗಬೇಕಿದೆ.

ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆಯು ವೇಕ್ ಅಪ್ ಕಾಲ್ ಮೂಲಕ ಬೆಳಿಗ್ಗೆ 5 ಗಂಟೆ ನಂತರ ವಿದ್ಯಾರ್ಥಿಗಳಿಗೆ ಮೊಬೈಲ್ ಮೂಲಕ ಕಾಲ್ ಮಾಡಿ ಎಬ್ಬಿಸಿ ಓದಲು ಹಚ್ಚುವುದು, ಪ್ರತಿಭಾವಂತ ವಿದ್ಯಾರ್ಥಿಗಳಿಂದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೇರಣೆ, ಮನೆ ಮನೆ ಭೇಟಿ, ವಿಶೇಷ ತರಗತಿಗಳು ಹೀಗೆ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ.

ವಿದ್ಯಾರ್ಥಿ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಪ್ರಮುಖ ಘಟ್ಟವಾಗಿದ್ದರಿಂದ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಸರಕಾರ ಈಗಾಗಲೇ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಆದಾಗ್ಯೂ ಇಷ್ಟೊಂದು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಇಲಾಖೆ ನಡೆಸುವ ಇಂತಹ ಪೂರ್ವಭಾವಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಕಾರಣ ಏನು, ಇದಕ್ಕೆ ಯಾರು ಹೊಣೆ ಎಂಬುದಕ್ಕೆ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳೇ ಉತ್ತರಿಸಬೇಕಿದೆ.

ಈ ಹಿಂದೆ ಶಿರಹಟ್ಟಿ-ಲಕ್ಮೇಶ್ವರ ತಾಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನಮಾನಸದಲ್ಲಿ ಉಳಿದಿರುವ ಆರ್.ಎಸ್. ಬುರಡಿ ಅವರು ಪದೋನ್ನತಿ ಹೊಂದಿ ಇತ್ತೀಚೆಗೆ ಇಲಾಖೆಯ ಉಪನಿರ್ದೆಶಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದು, ಪೂರ್ವಭಾವಿ ಪರೀಕ್ಷೆಯಲ್ಲಿ ಇಷ್ಟೊಂದು ವಿದ್ಯಾರ್ಥಿಗಳು ಫೇಲ್ ಆಗಿದ್ದಕ್ಕೆ ಸೂಕ್ತ ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮ ವಹಿಸುವುದಕ್ಕೆ ಗಮನ ಹರಿಸಬೇಕೆಂಬುದು ಅವರ ಆಪ್ತವಲಯದಲ್ಲಿ ಕೇಳಿ ಬರುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಇಓ ಎಚ್.ಎನ್. ನಾಯ್ಕ, ಪ್ರತಿ ಪ್ರೌಢಶಾಲೆಗೆ ಈಗಾಗಲೇ 3-4 ಬಾರಿ ಭೇಟಿ ನೀಡಲಾಗಿದೆ. ನಿಧಾನಗತಿಯ ಮಕ್ಕಳ ಪ್ರಗತಿಗೆ 4 ಕೇಂದ್ರಗಳಲ್ಲಿ ಹೆಚ್ಚಿನ ತರಬೇತಿ ನೀಡಲಾಗುತ್ತಿದೆ. ಇಲಾಖೆಯ ಸುಧಾರಣೆ ಕ್ರಮಗಳು ಸಹ ನಿರಂತರವಾಗಿ ನಡೆಯುತ್ತಿವೆ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!