ವಿಜಯಸಾಕ್ಷಿ ಸುದ್ದಿ, ಗದಗ: ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳನ್ನು ಸಾಮಾನ್ಯ ಮಕ್ಕಳೊಂದಿಗೆ ಒಟ್ಟುಗೂಡಿಸಿ ಶಾಲೆಯ ಎಲ್ಲ ಚಟುವಟಿಕೆಗಳಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುವಿಕೆಯನ್ನು ಸಕ್ರೀಯಗೊಳಿಸುವ ಕಾರ್ಯಕ್ಕೆ ನಾವೆಲ್ಲರೂ ಮುಂದಾಗಬೇಕೆಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಮನ್ವಯಾಧಿಕಾರಿ ಎಸ್.ಪಿ. ಪ್ರಭಯ್ಯನಮಠ ಹೇಳಿದರು.
ಅವರು ಗುರುವಾರ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಗದಗ-ಬೆಟಗೇರಿ ರೋಟರಿ ಕ್ಲಬ್ ವತಿಯಿಂದ ಗದುಗಿನ ಸರ್ಕಾರಿ ಶಾಲೆ ನಂ.೨ರಲ್ಲಿ ಕ್ಲಸ್ಟರ್ ೫ರ ಮುಖ್ಯೋಪಾಧ್ಯಾಯರಿಗಾಗಿ ಏರ್ಪಡಿಸಿದ್ದ ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಪೂರಕ ಪರಿಸರ ನಿರ್ಮಾಣ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶೇಷ ಚೇತನ ಮಕ್ಕಳು ಸಾಧಿಸಬಲ್ಲರು. ಅವರಿಗೆ ಸಹಾನುಭೂತಿ-ಅನುಕಂಪ ಬೇಡ. ಉತ್ತಮ ಪರಿಸರ, ಪ್ರೋತ್ಸಾಹ ದೊರೆತರೆ ಅವರೂ ಸಾಧಕ ವ್ಯಕ್ತಿಗಳಾಗಿ, ಸಮಾಜ ಗುರುತಿಸಿ ಗೌರವಿಸುವ ಚೇತನಗಳಾಗುತ್ತಾರೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗದಗ-ಬೆಟಗೇರಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ರೇವಣಸಿದ್ದೇಶ್ವರ ಉಪ್ಪಿನ ಮಾತನಾಡಿ, ಅಂಗವಿಕಲತೆ ಶಾಪವಲ್ಲ. ಮಕ್ಕಳು ಆಟ-ಪಾಠದೊಂದಿಗೆ ಬಾಲ್ಯ ಕಳೆಯಬೇಕು. ವಿಶೇಷಚೇತನ ಮಕ್ಕಳು ಸಾಮಾನ್ಯ ಮಕ್ಕಳೊಂದಿಗೆ ಚಟುವಟಿಕೆಗಳಲ್ಲಿ ನಿರಂತರ ಪಾಲ್ಗೊಳ್ಳುವಂತೆ ನಾವೆಲ್ಲರೂ ಶ್ರಮಿಸಬೇಕೆಂದರು.
ಗದಗ-ಬೆಟಗೇರಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂತೋಷ ಅಕ್ಕಿ, ಅಸಿಸ್ಟಂಟ್ ಗವರ್ನ್ರ್ ಶಿವಾಚಾರ್ಯ ಹೊಸಳ್ಳಿಮಠ, ಅಕ್ಷಯ್ ಶೆಟ್ಟಿ ವಿಶೇಷ ಚೇತನ ಮಕ್ಕಳ ಪಾಲನೆ-ಪೋಷಣೆ ಕುರಿತು ಮಾತನಾಡಿದರು.
ಶಿಕ್ಷಕಿಯರಾದ ವ್ಹಿ.ಎಸ್. ಕಬ್ಬರಗಿ, ಎಸ್.ವಿ. ಇಂದಿರಾ ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯೆ ಎಫ್.ಜೆ. ದಲಭಂಜನ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಬಸವರಾಜ ಮೆಣಸಿನಕಾಯಿ ಪರಿಚಯಿಸಿದರು. ಸಂಪನ್ಮೂಲ ವ್ಯಕ್ತಿ ಶಶಿಧರ ಚಳಗೇರಿ ನಿರೂಪಿಸಿದರು. ಸಿ.ಆರ್.ಪಿ ಎಸ್.ಸಿ. ಹಿರೇಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಸವಿತಾ ಜಡಿ, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರಾದ ಪರಿಮಳಾ ಮಣ್ಣೂರ, ಕವಿತಾ ಹಾದಿ, ಮಹಾದೇವ ಸರವಿ, ಮಂಜುನಾಥ ಚಂದಾವರಿ, ಎಂ.ಎಂ. ಹಿಡ್ಕಿಮಠ, ಆರ್.ಎಂ. ಅಂಗಡಿ, ವಿ.ಕೆ. ಪಾಟೀಲ, ಸಿ.ಎಫ್. ನಾಗನೂರ ಮುಂತಾದವರಿದ್ದರು.
ಪ್ರಾಸ್ತಾವಿಕವಾಗಿ ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಮಾತನಾಡಿ, ವಿಶೇಷ ಚೇತನರಲ್ಲಿ ಕಂಡುಬರುವ ೨೧ ನ್ಯೂನ್ಯತೆಗಳನ್ನು ಗುರುತಿಸಿ ಅವುಗಳನ್ನು ವರ್ಗೀಕರಿಸಿ ವಿಶೇಷ ಮಗು ಸಾಮಾನ್ಯ ಮಗುವಿನೊಂದಿಗೆ ಸಾಮಾನ್ಯ ಶಾಲೆಯಲ್ಲಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವಂತೆ ನಾವು ಶ್ರಮಿಸಬೇಕು. ಸರ್ಕಾರದ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲಾಗಿದ್ದು, ಅವುಗಳು ಸದುಪಯೋಗ ಆಗಲಿ ಎಂದರು.