ಪ್ರಸಂಗಗಳು ಮನುಷ್ಯನನ್ನು ಕೆಟ್ಟವನನ್ನಾಗಿ ಮಾಡುತ್ತವೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯ ಹಕ್ಕಿಯಂತೆ ಹಾರಬಲ್ಲ, ಮೀನಿನಂತೆ ಈಜಬಲ್ಲನಾದರೂ ಮನುಷ್ಯ ಮನುಷ್ಯನಾಗಬೇಕು. ಅಂದಾಗ ಜೀವನದಲ್ಲಿ ಸಾರ್ಥಕತೆ ಮೂಡುತ್ತದೆ. ಹುಟ್ಟಿನಿಂದ ಯಾರೂ ಕೆಟ್ಟವರಲ್ಲ, ಕೆಲ ಪ್ರಸಂಗಗಳು ಮನುಷ್ಯನನ್ನು ಕೆಟ್ಟವನನ್ನಾಗಿ ಮಾಡುತ್ತವೆ. ಕಾಯಕ, ದಾಸೋಹ, ಪ್ರಸಾದಗಳಿಗೆ ವಚನಕಾರರು ನೀಡಿದ ಮಹತ್ವವನ್ನರಿತು ನಾವು ಮುನ್ನಡೆಯಬೇಕು. ಅಂದಾಗ ನಮ್ಮ ಬದುಕು ಪರಿಪೂರ್ಣತೆಯನ್ನು ಹೊಂದುತ್ತದೆ ಎಂದು ಪ್ರಾಚಾರ್ಯ ಡಾ. ರಾಜಶೇಖರ ದಾನರಡ್ಡಿ ಹೇಳಿದರು.

Advertisement

ತಾಲೂಕಾ ಶರಣ ಸಾಹಿತ್ಯ ಪರಿಷತ್ತು ಗದಗ ಮತ್ತು ತಾಲೂಕ ಕದಳಿ ಮಹಿಳಾ ವೇದಿಕೆ ಗದಗ ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಜಿಲ್ಲಾ ಕಾರಾಗ್ರಹದಲ್ಲಿ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ `ಮನಃ ಪರಿವರ್ತನೆಯಲ್ಲಿ ವಚನಗಳ ಪಾತ್ರ’ ಎಂಬ ವಿಷಯವಾಗಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾರಾಗ್ರಹದ ಅಧೀಕ್ಷಕ ಈರಪ್ಪ ರಂಗಾಪುರ ಮಾತನಾಡಿ, ಮನುಷ್ಯ ಮಾಡಿದ ದಾನ-ಧರ್ಮದ ಕಾರ್ಯಗಳು ಯಾವಾಗಲೂ ಆತನನ್ನು ಕಾಪಾಡುತ್ತವೆ. ಹಾಗಾಗಿ ನಮ್ಮ ನಡೆ-ನುಡಿ ಶುದ್ಧವಾಗಿದ್ದರೆ ನಮಗೆ ಯಾವಾಗಲೂ ದೇವರು ಒಳ್ಳೆಯದನ್ನು ಮಾಡುತ್ತಾನೆ ಎನ್ನುವ ವಿಷಯವನ್ನು ವಚನಕಾರರು ಸಮಾಜಕ್ಕೆ ವಚನಗಳ ಮೂಲಕ ಮಾನವೀಯ ಮೌಲ್ಯಗಳನ್ನು ಬಿತ್ತಿದ್ದಾರೆ. ಅವರ ಹಾದಿಯಲ್ಲಿ ನಾವು ಮುನ್ನಡೆದು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.

ಸುಲೋಚನಾ ಎಮ್. ಐಹೊಳ್ಳಿ ಮಾತನಾಡಿ, ಮಕ್ಕಳು ಒಳ್ಳೆಯವರಾಗಿ ಬದುಕನ್ನು ಸಾಗಿಸಲು ತಂದೆ-ತಾಯಿಗಳ ಪಾತ್ರ ಕುಟುಂಬದಲ್ಲಿ ಬಹಳ ಮುಖ್ಯ. ಕಾರಾಗ್ರಹದಲ್ಲಿರುವವರು ತಮ್ಮ ಮನಸ್ಸನ್ನು ಪರಿವರ್ತನೆಗೊಳಿಸಿಕೊಂಡು ಸತ್ಯ, ಶುದ್ಧ ಕಾಯಕದ ಹಾದಿಯಲ್ಲಿ ಮುನ್ನಡೆಯಿರಿ ಎಂದರು.

ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪ್ರೊ. ಎಸ್.ಯು. ಸಜ್ಜನಶೆಟ್ಟರ ಮಾತನಾಡಿ, ವಚನಕಾರರು ದುಷ್ಟ ಕಾರ್ಯ ಮಾಡಿದವರನ್ನು ಸಹ ತಿದ್ದಿದವರು, ಅದಕ್ಕಾಗಿ ಶರಣತ್ವವನ್ನು ಅಳವಡಿಸಿಕೊಂಡು ಸತ್ಕಾರ್ಯ, ಸತ್ಪಾತ್ರದ ಕೆಲಸ ನಿರ್ವಹಿಸಬೇಕು. ವಚನಗಳಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಶರಣ ಡಾ. ಎಂ.ವ್ಹಿ. ಐಹೊಳ್ಳಿಯವರು ಸಾಮೂಹಿಕ ವಚನ ಪ್ರಾರ್ಥನೆಯನ್ನು ಮಾಡಿಸಿದರು. ಕದಳಿ ಮಹಿಳಾ ವೇದಿಕೆಯ ಉಪಾಧ್ಯಕ್ಷೆ ರೇಣುಕಾ ಕರೇಗೌಡ್ರ ಸ್ವಾಗತಿಸಿದರು. ಪರಿಷತ್ತಿನ ಅಧ್ಯಕ್ಷರಾದ ಶರಣ ಪ್ರಕಾಶ ಟಿ.ಅಸುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಾ ಸಿ. ಹನಮಂತಗೌಡರ ಕಾರ್ಯಕ್ರಮ ನಿರೂಪಿಸಿದರು. ಶರಣೆ ರತ್ನಕ್ಕ ಪಾಟೀಲ ಶರಣು ಸಮರ್ಪಣೆಗೈದರು.

ಕಾರಾಗ್ರಹದಲ್ಲಿರುವ ಸರ್ವರಿಗೂ ಸುಲೋಚನಾ ಎಮ್. ಐಹೊಳ್ಳಿಯವರು ಸಿಹಿಯನ್ನು ಹಂಚಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರಾಗ್ರಹದ ಜೈಲರ್ ಸುನಂದಾ ಈರಬಾಯಿಗೋಳ, ಬಸವದಳ, ಗದಗ-ಬೆಟಗೇರಿ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ, ಮಲ್ಲಿಕಾರ್ಜುನ ನಿಂಗೋಜಿ, ಶಶಿಕಲಾ ಪಾಟೀಲ, ಸಿದ್ಧಣ್ಣ ಅಂಗಡಿ ಮತ್ತಿತತರರು ಉಪಸ್ಥಿತರಿದ್ದರು.

ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ಮಾತನಾಡಿ, ಯುವ ಮನುಷ್ಯನೂ ಹುಟ್ಟಿನಿಂದ ಕೆಟ್ಟವನಾಗಿರುವುದಿಲ್ಲ. ಕೆಲ ಸಂದರ್ಭಗಳು ಮನುಷ್ಯ ತಪ್ಪು ಮಾಡುವಂತೆ ಪ್ರೇರೇಪಿಸಬಹುದು. ಹಾಗಾಗಿ ನಾವು ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಕೆಲಸ ಕಾರ್ಯಗಳನ್ನು ಮಾಡಬೇಕು. ಒಂದು ವೇಳೆ ಗೊತ್ತಾಗದೇ ತಪ್ಪುಗಳನ್ನು ಎಸಗಿದರೂ ಸಹ ಮನಃ ಪರಿವರ್ತನೆಯ ಮೂಲಕ ಬದುಕನ್ನು ಅರ್ಥಪೂರ್ಣವಾಗಿ ಕಳೆಯಬೇಕು ಎನ್ನುವ ವಿಷಯವನ್ನು ವಚನಕಾರರು ತಿಳಿಸಿಕೊಟ್ಟಿದ್ದಾರೆ. ಅವರ ಹಾದಿಯಲ್ಲಿ ನಾವೆಲ್ಲಾ ನಡೆಯೋಣ ಎಂದು ಕಿವಿಮಾತು ಹೇಳಿದರು.


Spread the love

LEAVE A REPLY

Please enter your comment!
Please enter your name here