ವಿಜಯಸಾಕ್ಷಿ ಸುದ್ದಿ, ಗದಗ: ಸನ್ಯಾಸತ್ವಕ್ಕೆ ಪ್ರಮುಖವಾಗಿ ಬೇಕಾದುದು ಪರಮ ವೈರಾಗ್ಯ. ಪ್ರತಿಯೊಬ್ಬ ಮನುಷ್ಯನು ಮೊದಲು ತಪಸ್ವಿಯಾಗಬೇಕು. ತಪಸ್ಸಿನಿಂದ ಗಳಿಸಿದ ಜ್ಞಾನ ಮತ್ತು ಆನಂದವನ್ನು ಇತರರಿಗೆ ಹಂಚುವ ಗುಣ ಬೆಳೆಸಿಕೊಳ್ಳಬೇಕು. ಶ್ರೀ ರಾಮಕೃಷ್ಣ ಪರಮಹಂಸರು ತಾವು ಮಾಡಿದ ಸುದೀರ್ಘ ತಪಸ್ಸಿನ ಫಲವನ್ನು ಸ್ವಾಮಿ ವಿವೇಕಾನಂದರಿಗೆ ಧಾರೆಯೆರೆದರು. ಆ ಮೂಲಕ ವಿವೇಕಾನಂದರು ಜಗತ್ತಿಗೆ ಬೆಳಕಾದರು ಎಂದು ಗದಗ-ವಿಜಯಪುರದ ರಾಮಕೃಷ್ಣ ವಿವೇಕಾನಂದಾಶ್ರಮದ ಸ್ವಾಮಿ ನಿರ್ಭಯಾನಂದ ಸ್ವಾಮೀಜಿ ಹೇಳಿದರು.
ಬುಧವಾರ ತಾಲೂಕಿನ ಹುಲಕೋಟಿ ಗ್ರಾಮದ ಶ್ರೀ ಕೈಲಾಸ ಆಶ್ರಮದ 34ನೇ ವಾರ್ಷಿಕೋತ್ಸವದ ಸಮ್ಮುಖದಲ್ಲಿ ಮಾತನಾಡಿದ ಅವರು, ಭಾರತೀಯ ಸನ್ಯಾಸತ್ವದ ಇತಿಹಾಸವು ಮಹರ್ಷಿ ಯಾಜ್ಞವಲ್ಕರಿಂದ ಆರಂಭವಾಯಿತು. ಯಾಜ್ಞವಲ್ಕ, ಬುದ್ಧ ಹಾಗೂ ಶಂಕರಾಚಾರ್ಯರು ಈ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಿದರು ಎಂದರು.
ಹೊಸಳ್ಳಿ ಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಸ್ವಾಮೀಜಿ ಮಾತನಾಡಿ, ಗುರು ಆದವನು ಜಾತಿ-ಮತ-ಪಂಥ ನೋಡದೇ, ಬಯಸಿ ಬಂದ ಭಕ್ತನ ಮಸ್ತಕದ ಮೇಲೆ ಹಸ್ತ ಇಟ್ಟು ಮಾರ್ಗದರ್ಶನ ಮಾಡಬೇಕು. ಎಲ್ಲರನ್ನು ಪ್ರೀತಿಸಬೇಕು, ಉಪದೇಶ ನೀಡಬೇಕು. ಅದೇ ಶರಣರು ಪ್ರತಿಪಾದಿಸಿದ ಧರ್ಮ. ಅಂಥಹ ಬಸವಾದಿ ಶಿವಶರಣರ ಪರಂಪರೆಯಲ್ಲಿ ಬೂದೀಶ್ವರ ಮಠ ಬೆಳೆದುಬಂದಿದೆ ಎಂದರು.
ದೇವರಿಗೆ ದೀಪ ಬೆಳಗುವುದು ಎಷ್ಟು ಮುಖ್ಯವೋ, ಹಸಿದು ಬಂದವರಿಗೆ ಅನ್ನ ನೀಡುವುದು ಅಷ್ಟೇ ಮುಖ್ಯ. ಆ ಕಾರಣಕ್ಕಾಗಿಯೇ ಶರಣ ಪರಂಪರೆಯಲ್ಲಿ ಕಾಯಕ ಮತ್ತು ದಾಸೋಹಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಪ್ರತಿಯೊಂದು ಕಾಯಕದ ಶ್ರೇಷ್ಠತೆಯನ್ನು ಎತ್ತಿ ಹಿಡಿಯಲಾಗಿದೆ ಎಂದರು.
ಅಣ್ಣಿಗೇರಿಯ ಡಾ. ಶಿವಕುಮಾರ ಸ್ವಾಮೀಜಿ ಮಾತನಾಡಿ, ಜಗತ್ತಿನ ಅಜ್ಞಾನ ಕಳೆಯಲು ಜಗದ್ಗುರು ಸಿದ್ದಾರೂಢರ ಪರಂಪರೆ ಅವತರಿಸಿದೆ. 14 ಭಾಷೆಗಳ ಜ್ಞಾನ ಹೊಂದಿದ್ದ ಸಿದ್ದಾರೂಢರು ದೇಶದುದ್ದಕ್ಕೂ ಸಂಚರಿಸಿ ಆಧ್ಯಾತ್ಮದ ಬೀಜ ಬಿತ್ತಿದರು. ಅವರ ಶಿಷ್ಯ ಪರಂಪರೆಯೇ ಇಂದು ಸಮಾಜವನ್ನು ಮುನ್ನಡೆಸುತ್ತಿದೆ ಎಂದರು.
ಶ್ರೀ ಕೈಲಾಸ ಆಶ್ರಮದ ಪೀಠಾಧಿಪತಿ ಶ್ರೀ ಜಯೇಂದ್ರಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಚಿಕೇನಕೊಪ್ಪದ ಶಿವಶಾಂತವೀರ ಶರಣರು, ಅಧ್ಯಾತ್ಮ ವಿದ್ಯಾಶ್ರಮದ ಡಾ. ನೀಲಮ್ಮತಾಯಿ, ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಉಪಸ್ಥಿತರಿದ್ದರು.
ಶಿರಹಟ್ಟಿ ಫಕೀರ ಸ್ವಾಮಿಗಳು ಮಠ-ಮಸೀದಿಗಳ ಮೂಲಕ ಭಾವೈಕ್ಯತೆಯ ಸಂದೇಶ ಪಸರಿಸಿದ್ದಾರೆ. ಇಂತಹ ಕಾರಣಗಳಿಂದಲೇ ಭಾರತವು ಆಧ್ಯಾತ್ಮಿಕ ಲೋಕದ ಕೊಂಡಿಯಾಗಿದೆ.
-
ಶ್ರೀ ಫಕೀರೇಶ್ವರ ಸ್ವಾಮೀಜಿ.
“ದೇವರಿಗಿಂತ ಗುರು ದೊಡ್ಡವನು. ನೆಲ ಕ್ಷೇತ್ರವಾಗಬೇಕಾದರೆ, ಜಲ ತೀರ್ಥವಾಗಬೇಕಾದರೆ, ಪದಾರ್ಥ ಪ್ರಸಾದವಾಗಬೇಕಾದರೆ ಅದಕ್ಕೆ ತಿರುಚ್ಚಿ ಶ್ರೀಗಳಂಥ ಗುರುಗಳ ಪಾದಸ್ಪರ್ಶ ಅವಶ್ಯ. ಹೀಗಾಗಿ ದೇವರಿಂದ ಮನುಷ್ಯನ ಕಲ್ಯಾಣ ಸಾಧ್ಯವಿಲ್ಲ. ದೇವರು ನರರೂಪದಲ್ಲಿ ಬಂದು ಗುರುವಾಗಿ ಮಾರ್ಗದರ್ಶನ ಮಾಡಿದಾಗ ಮಾತ್ರವೇ ಮನುಷ್ಯನ ಕಲ್ಯಾಣ ಸಾಧ್ಯ”
-
ಡಾ. ನೀಲಮ್ಮತಾಯಿ.



