ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಾನವ ಕಳ್ಳ ಸಾಗಾಣಿಕೆ ಜಾಲ ಕಂಡು ಬರುತ್ತಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು. ಮಾನವ ಹಕ್ಕುಗಳಿಗೆ ಧಕ್ಕೆ ಬರದಂತೆ ನಡೆದುಕೊಳ್ಳುವದರೊಂದಿಗೆ ಕಾನೂನುಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಭರತ್ ಕರಗುದರಿ ತಿಳಿಸಿದರು.
ಅವರು ಪಟ್ಟಣದ ಲಿಟಲ್ ಹಾರ್ಟ್ಸ ಇಂಟರನ್ಯಾಶನಲ್ ಸ್ಕೂಲ್‌ನಲ್ಲಿ ಬುಧವಾರ ತಾಲೂಕು ಕಾನೂನು ಸೇವೆಗಳ ಸಮಿತಿ ಲಕ್ಷ್ಮೇಶ್ವರ, ವಕೀಲರ ಸಂಘ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ, ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕ ಆಡಳಿತ, ತಾಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಹಾಗೂ ಪ್ರತಿಜ್ಞಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟುವುದು ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ. ಅದನ್ನು ಎಲ್ಲರೂ ಜಾಗ್ರತೆಯಿಂದ ಪಾಲಿಸಿದಾಗ ಮಾತ್ರ ಸಾಧ್ಯ. ಅಪ್ರಾಪ್ತರು ಬೈಕ್ ಸವಾರಿ ಮಾಡಬಾರದು. ಹಾಗೇನಾದರೂ ಮಾಡಿದರೆ ಕಾನೂನಿನ ಅಡಿಯಲ್ಲಿ ದಂಡ ವಿಧಿಸಬಹುದಾಗಿದೆ. ಈ ನಿಟ್ಟಿನಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಲಾವಣೆ ಮಾಡದಿರುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿ, ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ದಿವಾಣಿ ನ್ಯಾಯಾಧೀಶರಾದ ಸತೀಶ ಎಂ ಮಾತನಡಿ, ಮಕ್ಕಳು ಮೊಬೈಲ್ ಇನ್‌ಸ್ಟಾಗ್ರಾಂ, ಫೇಸ್‌ಬುಕ್, ವಾಟ್ಸ್ಪ್‌ಗಳಂತಹ ಅಂತರ್ಜಾಲಗಳ ಮೋಹಕ್ಕೆ ಬಲಿಯಾಗದೆ ನಿಮ್ಮ ಓದಿನ ಕಡೆ ಗಮನ ಹರಿಸಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಪ್ರಾಚಾರ್ಯ ಗಂಗಾಧರ ಶಿರಹಟ್ಟಿ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ರಾಮೇಶ್ವರ ಶಿರಹಟ್ಟಿ, ಬಿ.ವಿ. ನೇಕಾರ, ವಿ.ಎಸ್. ಪಶುಪತಿಹಾಳ, ಬಿ.ಎಸ್. ಬಾಳೇಶ್ವರಮಠ, ಶಿಕ್ಷಕರಾದ ಬಸೀರಹ್ಮದ್ ಚೌರಿ, ತೇಜಸ್ವಿನಿ ಅಲ್ಲಯ್ಯನವರಮಠ, ವೀರೇಶ ಶಿರಹಟ್ಟಿ, ಪೂರ್ಣಿಮಾ ಕೊಡ್ಲಿ, ಸೀಮಾ ಪಾಟೀಲ ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಹಾಜರಿದ್ದರು. ಮೇರಿ ಅಂಥೋನಿ, ಸುವರ್ಣ ಹಡಗಲಿ, ಯಲ್ಲಪ್ಪ ಶಿರೂರ ನಿರೂಪಿಸಿದರು.
ವಕೀಲ ಪ್ರಕಾಶ ವಾಲಿ ಉಪನ್ಯಾಸ ನೀಡಿ, ಭಿಕ್ಷಾಟನೆ ತಡೆಗಟ್ಟುವುದು, ಸೈಬರ್ ಕ್ರೈಮ್ ಗಳಿಗೆ ಬಲಿಯಾಗದಿರುವುದು, ಮಹಿಳೆಯರು ಮತ್ತು ಮಕ್ಕಳು ಒಬ್ಬಂಟಿಯಾಗಿ ಹೋಗುವಾಗ ಮೋಸಕ್ಕೆ ಒಳಗಾಗದೆ ಜಾಗ್ರತೆ ವಹಿಸಿ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಬೇಕು. ಇತ್ತೀಚಿನ ದಿನಮಾನಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಆಸೆ-ಆಮಿಷಗಳಿಗೆ ಒಳಗಾಗಿ ಮಾನವ ಕಳ್ಳ ಸಾಗಾಣಿಕೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಮಹಿಳೆಯರು ಮತ್ತು ಮಕ್ಕಳು ಮೋಸಕ್ಕೆ ಒಳಗಾಗದಂತೆ ಜಾಗ್ರತೆ ವಹಿಸಿ ಎಂದರು.