ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಪ್ರೌಢಶಾಲೆ, ಕಾಲೇಜುಗಳು ವ್ಯಕ್ತಿತ್ವ ರೂಪಿಸುವ ವೇದಿಕೆಗಳಾಗಿವೆ. ನಮಗೆ ದೊರೆತ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಣೆ ಮಾಡಬೇಕು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪ್ರತಿಯೊಬ್ಬರೂ ನೈತಿಕ ಮೌಲ್ಯ ಬೆಳೆಸಿಕೊಳ್ಳಬೇಕು ಎಂದು ಮಾಜಿ ವಿಧಾನಸಭಾ ಸದಸ್ಯರು ಮತ್ತು ಶ್ರೀ ಸಿದ್ಧಾರೂಢ ಸ್ವಾಮೀಜಿ ಟ್ರಸ್ಟ್ ಸಮಿತಿ (ಮೇಲ್ಮನೆ) ಅಧ್ಯಕ್ಷರಾದ ಡಿ.ಆರ್. ಪಾಟೀಲ್ ಹೇಳಿದರು.
ಮಂಗಳವಾರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ರಾಜ್ಯ ಎನ್‌ಎಸ್‌ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಕೋಶ ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಜಂಟಿಯಾಗಿ 5 ದಿನಗಳ ಎನ್‌ಎಸ್‌ಎಸ್ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಿರಂತರವಾಗಿ ಮೌಲ್ಯಯುತ ಶಿಕ್ಷಣ ನೀಡುವುದು ಅವಶ್ಯವಾಗಿದೆ. ವ್ಯಕ್ತಿತ್ವ ರೂಪಿಸಲು ವಿಶೇಷ ಗಮನ ಹರಿಸಬೇಕಾಗಿದೆ. ಎನ್‌ಎಸ್‌ಎಸ್ ಗೀತೆಯು ಬದುಕಿನಲ್ಲಿ ಬದಲಾವಣೆಗಳನ್ನು ತರುತ್ತದೆ. ಗಾಂಧೀಜಿ, ಸ್ವಾಮಿ ವಿವೇಕಾನಂದರ ಹಲವಾರು ವಿಚಾರಗಳು ನಮಗೆ ದಾರಿದೀಪವಾಗಿವೆ. ಸ್ವಯಂ ಸೇವಕರು ಆಯ್ಕೆ ಮಾಡಿಕೊಂಡ ಗ್ರಾಮಗಳನ್ನು ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂಬುದನ್ನು ಅವರ ವಿಚಾರಕ್ಕೆ ಬಿಟ್ಟು ಬಿಡಿ. ಕಾರ್ಯಕ್ರಮಗಳನ್ನು ಅನುಷ್ಠಾನ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಶಿಕ್ಷಕರು ಜವಾಬ್ದಾರಿಯ ಸ್ಥಾನದಲ್ಲಿದ್ದು, ವಿದ್ಯಾರ್ಥಿಗಳಲ್ಲಿ ಬದಲಾವಣೆ ತರಬೇಕಾಗಿದೆ ಎಂದರು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕರಾದ ಪ್ರೊ. ವೆಂಕಪ್ಪಯ್ಯ ಆರ್.ದೇಸಾಯಿ ಮಾತನಾಡಿ, ಸುಮಾರು 50 ವರ್ಷಗಳ ಕಾಲ ಎನ್‌ಎಸ್‌ಎಸ್ ಜೊತೆ ಒಡನಾಟ ಹೊಂದಿದ್ದೇನೆ. ಐಐಟಿ ಕರಗಪುರದಲ್ಲಿ ಸಹ ಎನ್‌ಎಸ್‌ಎಸ್‌ನಲ್ಲಿ ಭಾಗಿಯಾಗಿದ್ದೆ. ಶಿಕ್ಷಕರು ಪ್ರೇರಣೆಯನ್ನು ನೀಡುವವರಾಗಬೇಕು. ಜೀವನವನ್ನು ಸಾರ್ಥಕ ಮಾಡಿಕೊಳ್ಳಲು ಪ್ರಯತ್ನಿಸಬೇಕಾಗಿದೆ. ಉತ್ತಮ ಜೀವನವನ್ನು ನಡೆಸಬೇಕು ಎಂದು ತಿಳಿಸಿದರು.
ಪ್ರೊ. ಜಿ.ಬಿ. ಶಿವರಾಜು, ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಬಸವರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಗಾಂಧೀಜಿ ಕುರಿತಾದ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಸಿಂಡಿಕೇಟ್ ಸದಸ್ಯರಾದ ಎಸ್.ಎನ್. ಪರಾಂಡೆ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಸಚಿವೆ ಅನುರಾಧ ವಸ್ತ್ರದ, ಮೌಲ್ಯಮಾಪನ ಕುಲಸಚಿವೆ ಡಾ.ರತ್ನಾ ಭರಮಗೌಡರ, ಕೆಎಸ್‌ಎಲ್‌ಯು ಕಾನೂನು ಶಾಲೆಯ ಸಹಾಯಕ ಪ್ರಾಧ್ಯಾಪಕರಾದ ಐ.ಬಿ. ಬಿರಾದಾರ್, ಪ್ರಶಾಂತ್ ಎಡ್ರಾಮಿಮಠ್ ಸೇರಿದಂತೆ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.
ಐಶ್ವರ್ಯ ಭಟ ನಿರೂಪಿಸಿದರು. ಸಿಂಚನಾ ಅತಿಥಿಗಳನ್ನು ಪರಿಚಯಿಸಿದರು. ಆದ್ವಿ ವಂದಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಎನ್‌ಎಸ್‌ಎಸ್ ಕೋಶದ ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ಮಾತನಾಡಿ, ಮೌಲ್ಯಾಧಾರಿತ ಶಿಕ್ಷಣ ಒದಗಿಸಲು ಎನ್‌ಎಸ್‌ಎಸ್ ಸಹಕಾರಿಯಾಗಿದೆ. ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬಹುದು. ಅಲ್ಲದೇ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಎನ್‌ಎಸ್‌ಎಸ್ ನೆರವಾಗಲಿದೆ. ಪರೀಕ್ಷೆಗಳನ್ನು ಎದುರಿಸಲು ಸಹಾಯಕವಾಗಲಿದೆ. ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಸದೃಢ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದರು.