ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ರಾಜ್ಯದಲ್ಲಿರುವ ಎಲ್ಲ ಮುಸ್ಲಿಂ ಸಮುದಾಯದವರು ಕಡ್ಡಾಯವಾಗಿ ಧರ್ಮದ ಕಾಲಂನಲ್ಲಿ ‘ಇಸ್ಲಾಂ’ ಎಂದು, ಜಾತಿ ಕಾಲಂನಲ್ಲಿ ‘ಮುಸ್ಲಿಂ’ ಎಂದು ಹಾಗೂ ಉಪಜಾತಿ ಕಾಲಂನಲ್ಲಿ (ಕೆಟಗರಿಯಲ್ಲಿ ಲಾಭ ಪಡೆಯುವವರನ್ನು ಹೊರತುಪಡಿಸಿ) ಉಳಿದೆಲ್ಲವರು ‘ಮುಸ್ಲಿಂ’ ಎಂದು ನಮೂದಿಸಲು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾದ ರಾಜ್ಯಾಧ್ಯಕ್ಷ ಮಹ್ಮದಶಫಿ ಎಸ್ ನಾಗರಕಟ್ಟಿ ಮನವಿ ಮಾಡಿದ್ದಾರೆ.
ಇಂಥಹ ಸಮೀಕ್ಷೆಯಿಂದ ಎಲ್ಲ ಧರ್ಮದಲ್ಲಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಅದಕ್ಕಾಗಿ ಸಮಸ್ತ ಮುಸ್ಲಿಂ ಬಾಂಧವರು ಯಾವುದೇ ಗೊಂದಲಕ್ಕೆ ಒಳಗಾಗದೆ ಪ್ರತಿಯೊಬ್ಬರೂ ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ಸರಿಯಾಗಿ, ನಿಖರವಾಗಿ ಮಾಹಿತಿಗಳನ್ನು ಅಧಿಕಾರಿಗಳಿಗೆ ನೀಡಬೇಕು. ವಿಶೇಷವಾಗಿ ಧರ್ಮದ ಕಾಲಂನಲ್ಲಿ ‘ಇಸ್ಲಾಂ’ ಅಂತ ಬರೆಸಬೇಕು. ಜಾತಿ ಕಾಲಂನಲ್ಲಿ ‘ಮುಸ್ಲಿಂ’ ಅಂತ ಬರೆಸಬೇಕು ಹಾಗೂ ಉಪಜಾತಿ ಕಾಲಂನಲ್ಲಿ (ಈಗಾಗಲೇ ಕೆಟಗೇರಿಯಲ್ಲಿ ಲಾಭ ಪಡೆಯುತ್ತಿರುವರು ಅವರ ತಮ್ಮ ತಮ್ಮ ಉಪ ಜಾತಿಯನ್ನು ಬರೆಸಬೇಕು) ಇವರನ್ನು ಹೊರತುಪಡಿಸಿ ಉಳಿದವರೆಲ್ಲರೂ ‘ಮುಸ್ಲಿಂ’ ಅಂತ ಬರೆಸಬೇಕು. ಕುಟುಂಬದ ಕುಲಕಸುಬು ಕಾಲಂನಲ್ಲಿ ತಮ್ಮ ಕುಟುಂಬದ ಕುಲಕಸುಬು ಸರಿಯಾಗಿ ನಮೂದಿಸಬೇಕೆಂದು ಮನವಿ ಮಾಡಿದ್ದಾರೆ.