ಪ್ರತಿಯೊಬ್ಬರು ಅವರವರ ಕರ್ತವ್ಯಗಳನ್ನು ಬದ್ಧತೆಯಿಂದ ನಿರ್ವಹಿಸಬೇಕು: ಜಿಲ್ಲಾಧಿಕಾರಿ ದಿವ್ಯ ಪ್ರಭು

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಕಂದಾಯ ಇಲಾಖೆ ಸರಕಾರದ ಪ್ರಮುಖ ಮತ್ತು ದೊಡ್ಡ ಇಲಾಖೆ. ಸರಕಾರದ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುವ ಈ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಅರ್ಹತೆ ಆಧಾರದಲ್ಲಿ ಪದೋನ್ನತಿ, ಸರಕಾರಿ ಸೌಲಭ್ಯಗಳನ್ನು ನೀಡಲು ಜಿಲ್ಲಾಡಳಿತ ಬದ್ಧವಾಗಿದೆ. ಪ್ರತಿಯೊಬ್ಬರು ಅವರವರ ಕರ್ತವ್ಯಗಳನ್ನು ಬದ್ಧತೆಯಿಂದ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

Advertisement

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಕಂದಾಯ ನೌಕರರ ಕುಂದುಕೊರತೆ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬರು ಅಗತ್ಯಕ್ಕೆ ಅನುಗುಣವಾಗಿ ದಿನದ 24 ಗಂಟೆ ಕರ್ತವ್ಯ ನಿರ್ವಹಿಸಲು ಸಿದ್ಧರಿರಬೇಕು. ಇದು ಕಂದಾಯ ಇಲಾಖೆಗೆ ಹೆಚ್ಚು ಅನ್ವಯಿಸುತ್ತದೆ. ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಅಗತ್ಯ ಸೌಲಭ್ಯ ಮತ್ತು ಬಾಕಿ ಇರುವ ಬಡ್ತಿಗಳನ್ನು ನಿಯಮಾನುಸಾರ ನೀಡಲು ಕ್ರಮ ಕೈಗೊಳ್ಳುತ್ತೇವೆ. ಮುಂದಿನ 15 ದಿನಗಳಲ್ಲಿ ಎಲ್ಲ ತಹಸೀಲ್ದಾರರು ಆಯಾ ತಾಲೂಕು ಮಟ್ಟದಲ್ಲಿ ಕಂದಾಯ ನೌಕರರ ಸಭೆ ಜರುಗಿಸಿ, ವಿವರವಾದ ವರದಿಯೊಂದಿಗೆ ಬಡ್ತಿ, ಆರ್ಥಿಕ ಸೌಲಭ್ಯ, ಕಚೇರಿ ನಿವೇಶನ, ಕಟ್ಟಡ, ಸಿಬ್ಬಂದಿ ವಸತಿ ಗೃಹ ಪ್ರಸ್ತಾವನೆಯನ್ನು ಉಪವಿಭಾಗಾಧಿಕಾರಿಗಳ ಮೂಲಕ ಕಡ್ಡಾಯವಾಗಿ ಸಲ್ಲಿಸಬೇಕೆಂದು ನಿರ್ದೇಶನ ನೀಡಿದರು.

ಪ್ರತಿ ಗ್ರಾಮ ಆಡಳಿತ ಅಧಿಕಾರಿಗೆ ಆಯಾ ಗ್ರಾಮದಲ್ಲಿ ಹಾಗೂ ಕಂದಾಯ ನಿರೀಕ್ಷಕರಿಗೆ ಹೋಬಳಿ ಮಟ್ಟದಲ್ಲಿ ಸುಸಜ್ಜಿತ ಕಟ್ಟಡ ಹೊಂದಲು ಅನುವು ಆಗುವಂತೆ ಕಟ್ಟಡ ನಕ್ಷೆಯೊಂದಿಗೆ ಅಗತ್ಯ ದಾಖಲೆಗಳನ್ನು ತಹಸೀಲ್ದಾರರು ಸಲ್ಲಿಸಿದಲ್ಲಿ, ಸಮಗ್ರ ವರದಿಯೊಂದಿಗೆ ಸರಕಾರಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ವೇದಿಕೆಯಲ್ಲಿದ್ದ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಧಿಕಾರಿ ಶಾಲಂ ಹುಸೇನ್ ಮಾತನಾಡಿದರು. ಕಂದಾಯ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ವೆಂಕಟೇಶ ಹಟ್ಟಿಯವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸಚಿನ ಮಳಗಿ ಸ್ವಾಗತಿಸಿದರು. ಖಜಾಂಚಿ ನಾಸೀರ್ ಅಮರಗೋಳ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಆನಂದ ನಾಯಕ ವಂದಿಸಿದರು. ಕಂದಾಯ ನೌಕರರ ಪರವಾಗಿ ಮಲ್ಲಿಕಾರ್ಜುನ ಸೊಲಗಿ, ಮಹೇಶ ನಾಗವ್ವನವರ, ಪ್ರವೀಣ ಕುಲಕರ್ಣಿ ಸಾರಂಗಿ ಸೇರಿದಂತೆ ಇತರರು ಮಾತನಾಡಿದರು.

ಸಾರ್ವಜನಿಕರಿಗೆ ನೀಡುವ ಸೇವೆಯಲ್ಲಿ ವಿಳಂಬವಾಗಬಾರದು. ಎಲ್ಲ ಅಧಿಕಾರಿ, ಸಿಬ್ಬಂದಿಗಳು ತೃಪ್ತಿ ಮತ್ತು ಸಂತೋಷ ದಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ವೃತ್ತಿಯಲ್ಲಿ ನಿಧಾನತೆ, ಪಕ್ಷಪಾತ, ಭ್ರಷ್ಟತೆ, ನಿಯಮಬಾಹಿರ ವರ್ತನೆಗಳನ್ನು ಸಹಿಸುವುದಿಲ್ಲ. ಅಂತಹ ದೂರುಗಳು ಬಂದಲ್ಲಿ ಪರಿಶೀಲಿಸಿ, ಸತ್ಯಾಂಶ ವಿದ್ದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಎಚ್ಚರಿಕೆ ನೀಡಿದರು.


Spread the love

LEAVE A REPLY

Please enter your comment!
Please enter your name here