ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದಲ್ಲಿ ಅಂದಾಜು 25000 ಸ್ಮಾರಕಗಳಿದ್ದು, ಅದರಲ್ಲಿ ಈ ವರ್ಷ ಕನಿಷ್ಠ 3 ಸಾವಿರ ಸ್ಮಾರಕಗಳನ್ನು ಸಂರಕ್ಷಿಸಿ ಅದರ ಇತಿಹಾಸವನ್ನು ಮುಂದಿನ ಪೀಳಿಗೆಗೆ ನೀಡುವ ಉದ್ದೇಶವನ್ನು ಹೊಂದಿದ್ದೇವೆ. ಸ್ಮಾರಕಗಳ ನಿರ್ವಹಣೆಯಲ್ಲಿ ಈಗಾಗಲೇ ಸರ್ಕಾರ ಕಾರ್ಯ ನಿರ್ವಹಿಸುತ್ತಿದ್ದು, ಅದರ ಜೊತೆಗೆ ಡೆಕ್ಕನ್ ಹೆರಾಲ್ಡ್ ಫೌಂಡೇಶನ್ ಕೈಜೋಡಿಸಿ ಸೂಡಿಯ ನಾಗಕುಂಡ ಮೆಟ್ಟಿಲು ಬಾವಿಯ ದತ್ತು ಸ್ವೀಕಾರ ಮಾಡಿದ್ದಕ್ಕೆ ರಾಜಶ್ರೀ ಪಿನ್ನಮನೇನಿ ಅವರಿಗೆ ಅಭಿನಂದನೆಗಳು ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ನುಡಿದರು.
ನಗರದ ಜಿಲ್ಲಾಡಳಿತ ಭವನದ ಕೋರ್ಟ್ ಹಾಲ್‌ನಲ್ಲಿ ಮಂಗಳವಾರ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸ್ಮಾರಕ ದತ್ತು ಯೋಜನೆಯಡಿ ಸ್ಮಾರಕ ಮಿತ್ರ ಡೆಕ್ಕನ್ ಹೆರಿಟೇಜ್ ಫೌಂಡೇಷನ್‌ನೊಂದಿಗೆ ಗದಗ ಜಿಲ್ಲೆ ಸೂಡಿಯ ನಾಗಕುಂಡ ಮೆಟ್ಟಿಲು ಬಾವಿಯ ದತ್ತು ಸ್ವೀಕಾರದ ಒಡಂಬಡಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಸೂಡಿಯ ನಾಗಕುಂಡ ಮೆಟ್ಟಿಲು ಬಾವಿಯ ದತ್ತು ಸ್ವೀಕರಿಸಿದಕ್ಕೆ ರಾಜಶ್ರೀ ಪಿನ್ನಮನೇನಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಗದಗ ಜಿಲ್ಲೆ ಸೂಡಿಯು ರೋಣ ಮತಕ್ಷೇತ್ರಕ್ಕೆ ಸೇರಿದ್ದು, ಭಾರತರತ್ನ ಭೀಮಸೇನ ಜೋಶಿ, ದುರ್ಗಸಿಂಹರಂತಹ ಮಹಾನ್ ವ್ಯಕ್ತಿಗಳ ಬೀಡಾಗಿದೆ. ಗದಗ ಜಿಲ್ಲೆ ಸಂಗೀತ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪರಿಮಿತ ಇತಿಹಾಸವನ್ನು ಹೊಂದಿದೆ ಎಂದು ನುಡಿದರು.
ಇತ್ತೀಚೆಗೆ ಪಾರಂಪರಿಕ ಪ್ರದೇಶವಾದ ಲಕ್ಕುಂಡಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಆದಿಯಾಗಿ ಜಿಲ್ಲಾಧಿಕಾರಿ, ಜಿ.ಪಂ ಸಿಇಒ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಕೈಗೊಂಡು ಒಂದೇ ದಿನದಲ್ಲಿ 1 ಸಾವಿರಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳನ್ನು ಸಂಗ್ರಹಿಸಲಾಗಿದೆ. ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಕರ್ನಾಟಕದಿಂದ ಲಕ್ಕುಂಡಿ ಇತಿಹಾಸ ಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶನೆಗೊಂಡಿದೆ, ಲಕ್ಕುಂಡಿಯ ಸಂಪೂರ್ಣ ಇತಿಹಾಸ ತಿಳಿಯಲು ಮತ್ತು ಅದರ ಅಭಿವೃದ್ಧಿಗೆ ಲಕ್ಕುಂಡಿ ಪಾರಂಪರಿಕ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ಸ್ಮಾರಕಗಳನ್ನು ಉಳಿಸಲು ಎಲ್ಲರ ಸಹಕಾರ ಅತ್ಯವಶಕ ಎಂದು ಸಚಿವರು ಹೇಳಿದರು.
ಡೆಕ್ಕನ್ ಹೆರಿಟೇಜ್ ಫೌಂಡೇಷನ್ ಸ್ಥಾಪಕರು ಮತ್ತು ಸಹ ಸ್ಥಾಪಕರಾದ ಡಾ. ಹೆಲೆನ್ ಫಿಲಾನ್ ಮತ್ತು ಸ್ಟೀಫನ್ ಬ್ಲೋಚ್ ಸಲೋಜ್ ಮಾತನಾಡಿ, ಭಾರತವು ತನ್ನದೇ ಆದ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಅದರಲ್ಲಿ ಗದಗಿನ ವಾಸ್ತುಶಿಲ್ಪ ಸಂಸ್ಕೃತಿ ವಿಶೇಷತೆಯಿಂದ ಕೂಡಿದೆ. ಸ್ಮಾರಕದ ಹತ್ತಿರ ಹೋಗುತ್ತಿದ್ದಂತೆ ಇಲ್ಲಿ ಜನರು ಅತ್ಯಂತ ಪ್ರೀತಿ-ವಿಶ್ವಾಸದಿಂದ ಕಾಣುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜಶ್ರೀ ಪಿನ್ನಮನೇನಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಅಶೋಕ ಮಂದಾಲಿ, ವಿ.ಬಿ. ಸೋಮನಕಟ್ಟಿಮಠ, ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜ ಎ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿ.ಪಂ ಸಿಇಒ ಭರತ್ ಎಸ್, ಡಿಸಿಎಫ್ ಸಂತೋಷಕುಮಾರ, ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಆಫ್ ಇಂಡಿಯಾದ ಪ್ರತಿಮಾ ರಾವ್, ರಂಗ, ಸುಜಾತ, ಶೀತಲ್, ಜಿಲ್ಲಾ ಮಟ್ಟದ ಅಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.
ರೋಣ ಮತಕ್ಷತ್ರದ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಐತಿಹಾಸಿಕ ಸ್ಥಳಗಳನ್ನು ಹಿಂದಿನದಲೂ ಸರ್ಕಾರ ಸಂರಕ್ಷಣೆ ಮಾಡಿಕೊಂಡು ಬಂದಿದೆ. ಸಚಿವ ಎಚ್.ಕೆ. ಪಾಟೀಲರು ವಿಶೇಷ ಆಸಕ್ತಿ ವಹಿಸಿ ಹೊಸ ಆಲೋಚನೆಗಳೊದಿಂಗೆ ಸ್ಮಾರಕ ದತ್ತು ಸ್ವೀಕಾರ ಯೋಜನೆ ಪ್ರಾರಂಭಿಸಿದಕ್ಕೆ ಅಭಿನಂದನೆ ಸಲ್ಲಿಸಿದರು. ರಾಜಶ್ರೀ ಪಿನ್ನಮನೇನಿ ಅವರು ಹೈದರಾಬಾದ್‌ನಿಂದ ಗದಗ ಜಿಲ್ಲೆಯ ಸೂಡಿ ನಾಗಕುಂಡ ಮೆಟ್ಟಿಲು ಬಾವಿಯ ದತ್ತು ಸ್ವೀಕರಿಸಿದಕ್ಕೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.