ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಪುರಸಭೆ ಕಚೇರಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇಲ್ಲಿ ಎಲ್ಲ ಕೆಲಸಕ್ಕೂ ಹಣ ನಿಡಬೇಕು ಎಂದು ಸದಸ್ಯ ವಿಜಯ ಗಡಗಿ ಗಂಭೀರ ಆರೋಪ ಮಾಡಿದರು.
ಅವರು ಸೋಮವಾರ ಪುರಸಭೆಯ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು.
ಕಚೇರಿಯಲ್ಲಿನ ಸಿಬ್ಬಂದಿಗಳು ವಿನಾಕಾರಣ ಫಲಾನಿಭವಿಗಳನ್ನು ಅಲೆದಾಡಿಸುತ್ತಾರೆ. ಸ್ವತಃ ಸದಸ್ಯರೇ ಹೇಳಿದರೂ ಸಾರ್ವಜನಿಕರ ಕೆಲಸವಾಗುವುದಿಲ್ಲ. ನೇರವಾಗಿ ಬಂದು ಸಿಬ್ಬಂದಿಗಳಿಗೆ ದುಡ್ಡು ಕೊಟ್ಟರೆ ನಾಲ್ಕು ದಿನಗಳಲ್ಲಿ ಅವರಿಗೆ ಉತಾರ ಸಿಗುತ್ತದೆ. ಬಡವರು, ನಿರ್ಗತಿಕರಿಗೆ ಮಾತ್ರ ಸೌಲಭ್ಯ ದೊರೆಯುತ್ತಿಲ್ಲ. ಅವರ ಬಳಿ ಹಣ ಇರುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ಅಲೆದಾಡಿಸುತ್ತಿರಿ ಎಂದು ತೀವ್ರ ಆಕ್ರೋಶ ಹೊರಹಾಕಿದರು.
ಇದಕ್ಕೆ ಪಕ್ಷಬೇಧ ಮರೆತು ಸದಸ್ಯರು ಧ್ವನಿಗೂಡಿಸುತ್ತಿದ್ದಂತೆ ಮುಖ್ಯಾಧಿಕಾರಿ ರಮೇಶ ಹೊಸಮನಿ, ಕಚೇರಿಯಲ್ಲಿ ಆ ರೀತಿ ನಡೆದಿಲ್ಲ ಎನ್ನುತ್ತಿದ್ದಂತೆ ಬೊರವೆಲ್ ರಿಪೇರಿ ನೆಪದಲ್ಲಿ ಖರ್ಚು ಹಾಕಿದ್ದೀರಿ. ನಮ್ಮಲ್ಲಿ ಸುಸ್ಥಿತಿಯಲ್ಲಿರುವ ಎರಡು ಮೊಟಾರ್ ಇದ್ದು, ಇನ್ನುಳಿದ ಮೋಟಾರ್‌ಗಳು ಬಂದಾಗಿವೆ. ಹಿಗಿದ್ದರೂ ಖರ್ಚು ಹಾಕಿದ್ದೀರಿ. ಅಲ್ಲದೆ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿಲ್ಲ ಎನ್ನುತ್ತೀರಾದರೆ, ನಾನು ಸಾಕ್ಷಿ ಕೊಡುತ್ತೇನೆ. ಅದು ವಿಫಲವಾದಲ್ಲಿ ನಾನು ರಾಜೀನಾಮೆ ಕೊಡುತ್ತೇನೆ ಎಂದು ಸವಾಲೆಸೆದರು. ಮಧ್ಯ ಪ್ರವೇಶಿಸಿದ ಸದಸ್ಯ ಸಂಗನಗೌಡ ಪಾಟೀಲ, ಸಿಬ್ಬಂದಿ ತಪ್ಪು ಮಾಡಿದ್ದರೆ ಅವರ ಮೆಲೆ ಕ್ರಮ ತೆಗೆದುಕೊಳ್ಳಿ ಎಂದರು.
ಇದೀಗ ಬೇಸಿಗೆ ಆರಂಭವಾಗಿದ್ದು, ಕುಡಿಯುವ ನೀರಿನ ತೊಂದರೆಯಾಗದಂತೆ ನಿಗಾ ವಹಿಸಬೇಕು. ಮೋಟರ್ ಅಳವಡಿಕೆಯಲ್ಲಿ ಆಗಿರುವ ಭ್ರಷ್ಟಾಚಾರ ಕುರಿತು ತನಿಖೆ ನಡೆಸಬೇಕು ಎಂದು ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು. ಗೀತಾ ಮಾಡಲಗೇರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ಸಂಗನಗೌಡ ಪಾಟೀಲ, ಬಾವಾಸಾಬ ಬೆಟಗೇರಿ, ಸಂಗಪ್ಪ ಜಿಡ್ಡಿಬಾಗಿಲ, ಸಂತೋಷ ಕಡಿವಾಲ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.
ಪುರಸಭೆ ವ್ಯಾಪ್ತಿಯಲ್ಲಿನ ಸಂಕೀರ್ಣಗಳ ಬಾಡಿಗೆಯನ್ನು ವಸೂಲಿ ಮಾಡಿ, ಇಲ್ಲದಿದ್ದರೆ ನೊಟೀಸ್ ನೀಡಿ ಸಿಜ್ ಮಾಡಿ ಎಂದು ಸದಸ್ಯ ಗದಿಗೆಪ್ಪ ಕಿರೇಸೂರ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ಇದಕ್ಕೂ ಎಲ್ಲ ಸದಸ್ಯರು ಬೆಂಬಲ ವ್ಯಕ್ತಪಡಿಸಿ ಬಾಡಿಗೆ ಕೊಡದಿದ್ದರೆ ಅವರ ಆಸ್ತಿಗಳ ಮೆಲೆ ಭೋಜಾ ದಾಖಲಿಸಿ ಎಂದರು.