ಬೆಂಗಳೂರು:- ಭಾರತದ ಮೇಲೆ ಅಮೆರಿಕ ವಿಧಿಸುತ್ತಿರುವ ವಿಪರೀತ ಸುಂಕ ಕಳವಳಕಾರಿ ಬೆಳವಣಿಗೆ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಅಮೆರಿಕವು ಭಾರತದ ಉತ್ಪನ್ನಗಳ ಮೇಲೆ ವಿಪರೀತ ಸುಂಕ ವಿಧಿಸುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಈಗ ಅವರು ನಮ್ಮ ಔಷಧೋತ್ಪನ್ನಗಳ ಮೇಲೂ ವಿಪರೀತ ಸುಂಕ ಹೇರಿದ್ದಾರೆ. ಕೇಂದ್ರ ಸರ್ಕಾರವು ಪ್ರವೇಶಿಸಿ ಇದನ್ನು ತ್ವರಿತವಾಗಿ ಬಗೆಹರಿಸಬೇಕು ಎಂದರು.
ಚೀನಾ ಮತ್ತು ವಿಯೆಟ್ನಾಂ ಎರಡೂ ಉತ್ಪಾದನೆ ಹಾಗೂ ರಫ್ತಿನಲ್ಲಿ ನಮಗಿಂತ ಮುಂದಿವೆ. ಅವುಗಳ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮವಾಗಿ ಶೇ.30 ಮತ್ತು ಶೇ.19ರಷ್ಟು ಮಾತ್ರ ಸುಂಕ ಹೇರಿದ್ದಾರೆ. ಆದರೆ ಭಾರತದ ಉತ್ಪನ್ನಗಳ ಮೇಲೆ ಶೇ.50ರಷ್ಟು ಸುಂಕ ಹೇರಿದ್ದಾರೆ. ಇದರಿಂದ ನಮಗೆ ಹೊಡೆತ ಬೀಳುತ್ತಿರುವುದು ಸುಳ್ಳಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಸಲ ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಬ್ ಕೀ ಬಾರ್ ಟ್ರಂಪ್ ಎಂದು ಅವರ ಪರ ನೇರವಾಗಿ ಪ್ರಚಾರ ಮಾಡಿದ್ದರು. ಆದರೆ ಆಗ ಜೋ ಬೈಡನ್ ಗೆದ್ದರು. ಅವರೇನೂ ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಲಿಲ್ಲ. ಈ ಸಲ ಗೆದ್ದು ಬಂದ ಮೇಲೆ ಟ್ರಂಪ್ ಭಾರತದ ಮೇಲೆ ಅತಾರ್ಕಿಕವಾಗಿ ಸುಂಕ ವಿಧಿಸುತ್ತಿದ್ದು, ನಾವು ಅದರ ದುಷ್ಪರಿಣಾಮವನ್ನು ಎದುರಿಸಬೇಕಾಗಿ ಬಂದಿದೆ. ಎಚ್1-ಬಿ ವೀಸಾ ಮೇಲೆ ವರ್ಷಕ್ಕೆ ಒಂದು ಲಕ್ಷ ಡಾಲರ್ ಶುಲ್ಕ ವಿಧಿಸಿರುವುದು ಆಘಾತಕಾರಿಯಾಗಿದೆ. ಇಂತಹ ತೀರ್ಮಾನ ನಮ್ಮ ಐಟಿ ಸೇವೆಗಳು ಮತ್ತು ಎಫ್.ಡಿ.ಐ. ಮೇಲೆ ಕರಿನೆರಳನ್ನು ಸೃಷ್ಟಿಸುತ್ತಿದೆ. ಮೋದಿಯವರು ಇದನ್ನು ಬಗೆಹರಿಸಬೇಕು ಎಂದು ಪ್ರತಿಪಾದಿಸಿದರು.
ಟ್ರಂಪ್ ಇದುವರೆಗೂ ನಮ್ಮ ಎಲೆಕ್ಟ್ರಾನಿಕ್ ಮತ್ತು ಫಾರ್ಮಾ ಉತ್ಪನ್ನಗಳಿಗೆ ಸುಂಕದಿಂದ ವಿನಾಯಿತಿ ನೀಡಿದ್ದರು. ಆದರೆ ಈಗ ಫಾರ್ಮಾ ಉತ್ಪನ್ನಗಳನ್ನೂ ಬಿಟ್ಟಿಲ್ಲ. ಇದು ಕೇವಲ ಕರ್ನಾಟಕದ ಮೇಲೆ ಮಾತ್ರವಲ್ಲ, ಇಡೀ ಭಾರತದ ಮೇಲೆ ಪರಿಣಾಮ ಉಂಟುಮಾಡುತ್ತಿದೆ. ಟ್ರಂಪ್ ಏನೇ ಮಾಡಲಿ, ನಾವು ದೇಶದ ಪರವಾಗಿದ್ದೇವೆ. ನಮ್ಮಲ್ಲಿ ಅಪಾರ ಪ್ರತಿಭೆ ಇದೆ ಎಂದು ಅಭಿಪ್ರಾಯಪಟ್ಟರು.



