ಬೆಂಗಳೂರು: ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ ಬಿದ್ದ ಬೆನ್ನಲ್ಲೇ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಸಂಕಷ್ಟ ಎದುರಾಗಿದೆ.
ಲೈಸೆನ್ಸ್ ನೀಡುವ ನೆಪದಲ್ಲಿ ಕೇಳಲಾದ ಲಂಚದ ಬಹುಪಾಲು ಹಣವನ್ನು ಸಚಿವರಿಗೆ ನೀಡಬೇಕೆಂದು ಅಬಕಾರಿ ಡಿಸಿ ಹೇಳಿರುವ ಆಡಿಯೋ ಆಧಾರದ ಮೇಲೆ, ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಇದರಿಂದ ಅಬಕಾರಿ ಲೈಸೆನ್ಸ್‌ಗೆ ಕೋಟಿ ಕೋಟಿ ರೂಪಾಯಿ ಲಂಚ ಕೇಳಿದ್ದ ಪ್ರಕರಣ ಇದೀಗ ಸಚಿವರ ಮಟ್ಟಕ್ಕೂ ತಲುಪಿದೆ.
ಬ್ಯಾಟರಾಯನಪುರ ಕಚೇರಿಯಲ್ಲಿ 25 ಲಕ್ಷ ರೂ. ಲಂಚ ಸ್ವೀಕರಿಸುವ ಕೆಲವೇ ನಿಮಿಷಗಳ ಮುನ್ನ ದೂರುದಾರ ಲಕ್ಷ್ಮೀನಾರಾಯಣ ಮತ್ತು ಅಬಕಾರಿ ಡಿಸಿ ಜಗದೀಶ್ ನಾಯ್ಕ್ ನಡುವೆ ಲೈಸೆನ್ಸ್ ಡೀಲಿಂಗ್ ಕುರಿತು ಮಾತುಕತೆ ನಡೆದಿದೆ. ಈ ವೇಳೆ, ಲಂಚದ ಹಣವನ್ನು ಕೆಲವು ಅಧಿಕಾರಿಗಳ ಜೊತೆಗೆ ಸಚಿವರಿಗೂ ಹಂಚಬೇಕು ಎಂದು ಡಿಸಿ ಹೇಳಿದ್ದಾಗಿ ಆರೋಪಿಸಲಾಗಿದೆ. ಈ ಸಂಭಾಷಣೆಯನ್ನು ದೂರುದಾರರು ತಮ್ಮ ಮೊಬೈಲ್‌ನಲ್ಲಿ ಆಡಿಯೋ ರೂಪದಲ್ಲಿ ದಾಖಲಿಸಿಕೊಂಡಿದ್ದು, ಅದನ್ನೇ ಆಧಾರವಾಗಿ ಇದೀಗ ಸಚಿವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಇದರ ನಡುವೆ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹಾಗೂ ಅವರ ಪುತ್ರರು ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಸಿಎಲ್–7 ಪರವಾನಗಿ ನೀಡಲು ಪ್ರತಿ ಪರವಾನಗಿಗೆ 1.5 ಕೋಟಿ ರೂ. ಲಂಚ ಕೇಳಲಾಗಿದೆ ಎಂದು ಬಿಜೆಪಿ ಆರೋಪಿಸಿದ್ದು, ಈ ವಿಷಯದಲ್ಲಿ ಮುಖ್ಯಮಂತ್ರಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಜೊತೆಗೆ ಅಬಕಾರಿ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಇನ್ನೊಂದೆಡೆ, ಆರೋಪಗಳಿಗೆ ಪ್ರತಿಕ್ರಿಯಿಸಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, “ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದು ನನ್ನ ವಿರುದ್ಧದ ಕುತಂತ್ರ. ನನ್ನ ತೇಜೋವಧೆ ಮಾಡುವ ಪ್ರಯತ್ನ ಇದು. ನಾನು ಕಾನೂನು ಹೋರಾಟ ನಡೆಸುತ್ತೇನೆ. ಯಾರೋ ಹೇಳಿದಾಕ್ಷಣ ನನ್ನ ಪಾತ್ರ ಇದೆ ಎಂದು ಹೇಳಲು ಸಾಧ್ಯವಿಲ್ಲ” ಎಂದು ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.



