ಗದಗ: ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ನಡೆಸಿದ ಮಿಂಚಿನ ದಾಳಿಯಲ್ಲಿ 345 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡು ಮಹಿಳೆಯನ್ನು ಬಂಧಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಬೆಳಿಗ್ಗೆ ಗಸ್ತು ಕಾರ್ಯದಲ್ಲಿದ್ದ ಅಧಿಕಾರಿಗಳು ತಕ್ಷಣ ಕಾರ್ಯಾಚರಣೆ ಕೈಗೊಂಡರು. ಅಬಕಾರಿ ಉಪ ಅಧೀಕ್ಷಕ ಭೀಮಣ್ಣ ರಾಠೋಡ್ ನೇತೃತ್ವದಲ್ಲಿ, ವಲಯ ನಿರೀಕ್ಷಕರಾದ ಸುಮಾ ಜಿ.ಎಂ., ಸುವರ್ಣ ಕೋಟೆ ಹಾಗೂ ಉಪ ನಿರೀಕ್ಷಕ ಎನ್.ಆರ್. ಸಾಳುಂಕೆ ಸೇರಿದಂತೆ ಸಿಬ್ಬಂದಿ ಮತ್ತು ಪಂಚರ ಸಮ್ಮುಖದಲ್ಲಿ ಕಿಲ್ಲಾ ಓಣಿಯ ನಿವಾಸಿ ಗಿರಿಜವ್ವ (44) ಅವರ ಮನೆಯಲ್ಲಿ ಶೋಧ ನಡೆಸಲಾಯಿತು.
ಶೋಧ ಕಾರ್ಯಾಚರಣೆಯ ವೇಳೆ ಮಾರಾಟ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದ ಎಲೆ, ತೆನೆ ಹಾಗೂ ಬೀಜಗಳಿಂದ ಕೂಡಿದ ಒಣ ಗಾಂಜಾವನ್ನು 41 ಸಣ್ಣ ಪ್ಲಾಸ್ಟಿಕ್ ಪೌಚ್ಗಳಲ್ಲಿ ಪತ್ತೆ ಹಚ್ಚಲಾಗಿದೆ. ವಶಪಡಿಸಿಕೊಂಡ ಗಾಂಜಾದ ಒಟ್ಟು ತೂಕ 345 ಗ್ರಾಂ ಆಗಿದ್ದು, ಅಂದಾಜು ಮೌಲ್ಯ ಸುಮಾರು ₹15,000 ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಎನ್ಡಿಪಿಎಸ್ ಕಾಯ್ದೆ 1985ರ ಸೆಕ್ಷನ್ 8(c), 20(b)(ii)(A) ಹಾಗೂ 25ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿತಳನ್ನು ಬಂಧಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ.
ಮಾದಕ ವಸ್ತುಗಳ ವಿರುದ್ಧ ಇಲಾಖೆಯ ಕ್ರಮ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



