ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಮ್ಮನ್ನಾಳಿದ ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿಗೆ ಈ ವರ್ಷ 200 ವರ್ಷಗಳಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ, ಚೆನ್ನಮ್ಮಾಜಿಯ ಅಂಚೆ ಚೀಟಿಯ ಬದಲಾಗಿ, ಕೇಂದ್ರ ಸರಕಾರವು 200 ರೂ. ನಾಣ್ಯವನ್ನು ಬಿಡುಗಡೆ ಮಾಡಿ, ಚೆನ್ನಮ್ಮಾಜಿಯ ಸ್ಮರಣೆಯನ್ನು ಚಿರಸ್ಮರಣೀಯವಾಗಿ ಮಾಡಿದೆ. ಇದರಿಗಾಗಿ ಕೇಂದ್ರ ಸರಕಾರವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಚನ್ನು ಪಾಟೀಲ ಫೌಂಡೇಶನ್ ಸಂಸ್ಥಾಪಕ ಉಮೇಶ ಚನ್ನು ಪಾಟೀಲ ತಿಳಿಸಿದ್ದಾರೆ.
ಉಮೇಶ ಪಾಟೀಲ ಹೇಳಿದರು, “ಚನ್ನಮ್ಮಾಜಿ ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತಳಾಗಿರುವುದಿಲ್ಲ, ಇಡೀ ನಾರಿ ಕುಲಕ್ಕೆ ಮಾದರಿಯಾಗಿದ್ದಾರೆ. ಅವಳ ಧೈರ್ಯ ಮತ್ತು ಸಾಹಸದ ಕಥನಗಳನ್ನು ಓದಿ, ಇಂದಿನ ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಗತ್ತಿನ ಎಲ್ಲಾ ಮಹಿಳೆಯರು ಅವಳಂತೆ ಧೈರ್ಯ ಮತ್ತು ಸಾಹಸ ಗುಣಗಳನ್ನು ತಮ್ಮಲ್ಲಿ ಬೆಳೆಯಿಸಿಕೊಳ್ಳಬೇಕಾಗಿದೆ.”
200ನೇ ವರ್ಷದ ವಿಜಯೋತ್ಸವದ ಅಂಗವಾಗಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್‌ಜಿ 200 ರೂ. ನಾಣ್ಯವನ್ನು ಬಿಡುಗಡೆ ಮಾಡಿ, ಕಿತ್ತೂರು ಚೆನ್ನಮ್ಮಳ ಸಮಸ್ತ ಅಭಿಮಾನಿಗಳಿಗೆ ಸಂತೋಷವನ್ನು ನೀಡಿದರು. ಈ ಸಂದರ್ಭದಲ್ಲಿ ಹರಿಹರ ಪಂಚಮಸಾಲಿ ಪೀಠದ ಜ. ವಚನಾನಂದ ಶ್ರೀಗಳೂ ಹಾಜರಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮಹತ್ವ ನೀಡಿದರು. ಇಂತಹ ಐತಿಹಾಸಿಕ ನಿರ್ಣಯವನ್ನು ಕೈಗೊಂಡ ಕೇಂದ್ರ ಸರಕಾರವನ್ನು ಅಭಿನಂದಿಸುತ್ತೇನೆ ಎಂದು ಉಮೇಶ್ ಪಾಟೀಲ ಹೇಳಿದರು.


