ವಿಜಯಸಾಕ್ಷಿ ಸುದ್ದಿ, ಗದಗ: ಫೆ. 1ರಂದು ಬೆಳಿಗ್ಗೆ 11 ಗಂಟೆಗೆ ನಗರದ ಭೀಮಸೇನ್ ಜೋಶಿ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ ತಿಳಿಸಿದರು.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ಜಿಲ್ಲೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ರಾಜ್ಯಮಟ್ಟದ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದ್ದು, ಪ್ರಮುಖವಾಗಿ ಎನ್ಪಿಎಸ್ ಬದಲಾಗಿ ಓಪಿಎಸ್ ಜಾರಿ ಮಾಡುವ ಕುರಿತು ಹೋರಾಟದ ರೂಪುರೇಷೆಗಳನ್ನು ಚರ್ಚಿಸಲಾಗುವುದು ಎಂದರು.
ರಾಜ್ಯ ಘಟಕದ ಕಾರ್ಯಕಾರಿ ಸಭೆಯನ್ನು ಗದಗಲ್ಲಿ ನಡೆಸಬೇಕು ಎನ್ನುವುದು ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ಇಚ್ಛೆಯಾಗಿತ್ತು. ಹೀಗಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಭೆಯಲ್ಲಿ ಹಿಂದಿನ ಮಹಾಸಭೆಯ ನಡವಳಿಗಳನ್ನು ದಾಖಲಿಸಲಾಗುವುದು. 2025-26ನೇ ಸಾಲಿನ ರಾಜ್ಯ ಮಟ್ಟದ ಕ್ರೀಡಾಕೂಟಗಳ ಆಯೋಜನೆಯ ಬಗ್ಗೆ ಚರ್ಚಿಸಲಾಗುವುದು. ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಮರುಸ್ಥಾಪಿಸುವ ಸಂಬಂಧ ಸರ್ಕಾರದ ಗಮನ ಸೆಳೆಯಲು ರಾಜ್ಯ ಮಟ್ಟದ ಸಮಾವೇಶ ನಡೆಸುವ ಬಗ್ಗೆ ಚರ್ಚೆ ನಡೆಯುವುದು.
ಸುದ್ದಿಗೋಷ್ಠಿಯಲ್ಲಿ ಡಿ.ಎಸ್. ತಳವಾರ, ಸಿದ್ದಪ್ಪ ಲಿಂಗದಾಳ, ಎಂ.ಎನ್. ನಿಟ್ಟಾಲಿ, ರಾಜು ಕಂಟಿಗೊಣ್ಣವರ, ಮುತ್ತು ಮಲ್ಲಶೆಟ್ಟಿ, ಎ.ಐ. ಗಾಡಗೋಳಿ, ಡಿ.ಎಸ್. ದುರ್ಗಣ್ಣವರ, ಕೆ.ಎಫ್. ಹಳ್ಯಾಳ, ಕರೀಂ ಸಾಬಸುಣಗಾರ, ಆರ್.ಎಂ. ನಿಂಬನಾಯ್ಕರ, ಎಂ.ಬಿ. ಗಾಣಗಿ, ಬಿ.ಎಸ್. ಕಮತರ ಇದ್ದರು.
ಸರ್ಕಾರಿ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಲ್ಲಿ ಆಗುತ್ತಿರುವ ತಾಂತ್ರಿಕ ಸಮಸ್ಯೆಗಳು, ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿ, ಸಿಸಿಆರ್ ನಿಯಮ ಬಗ್ಗೆ ಚರ್ಚಿಸಲಾಗುವುದು. ಅಂದು ಸಂಜೆ 4ಕ್ಕೆ ಸರ್ಕಾರಿ ನೌಕರ ಸಂಘ ಹುಟ್ಟುಹಾಕಿದ ಮೆರಿ ದೇವಾಸಿಯಾ ಹೆಸರಿನಲ್ಲಿ ಗೃಹ ನಿರ್ಮಾಣ ಸಂಘದ ಉದ್ಘಾಟನೆ ಜರುಗಲಿದೆ ಎಂದು ಬಸವರಾಜ ಬಳ್ಳಾರಿ ವಿವರಿಸಿದರು.



