ವಿಜಯಸಾಕ್ಷಿ ಸುದ್ದಿ, ಗದಗ: ಕೃಷಿ ಇಲಾಖೆ ಹಾಗೂ ಐ.ಸಿ.ಎ.ಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಸಹಯೋಗದಲ್ಲಿ ಹುಲಕೋಟಿಯ ಶ್ರೀ ಕೈಲಾಸ ಆಶ್ರಮದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷಿ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳ ವಸ್ತುಪ್ರದರ್ಶನವನ್ನು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಉದ್ಘಾಟಿಸಿದರು.
ಬೆಂಗಳೂರಿನ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾದಿಪತಿಗಳಾದ ಜಗದ್ಗುರು ಜಯೇಂದ್ರಪುರಿ ಮಹಾಸ್ವಾಮಿಗಳು, ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಗಳು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.
ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಚೇರಮನ್ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಗಣ್ಯರಾದ ಸಿದ್ದು ಪಾಟೀಲ, ವಾಸಣ್ಣ ಕುರಡಗಿ, ಹುಲಕೋಟಿ ಅಗ್ರಿಕಲ್ಚರಲ್ ಸೈನ್ಸ್ ಫೌಂಡೇಶನ್ ಉಪಾಧ್ಯಕ್ಷ ಶಂಕರಗೌಡ ಪಾಟೀಲ, ಅಗ್ರಿಕಲ್ಚರ್ ಸೈನ್ಸ್ ಫೌಂಡೇಶನ್ ನಿರ್ದೇಶಕ ರವಿ ಮೂಲಿಮನಿ, ಗೌರವ ಕಾರ್ಯದರ್ಶಿ ಜಿ.ಸಿ. ಕೊರವನವರ, ಹುಲಕೋಟಿ ಗ್ರಾ.ಪಂ ಅಧ್ಯಕ್ಷರಾದ ನಾಗರತ್ನ ಬಾಳಿಹಳ್ಳಿಮಠ, ಉಪಾಧ್ಯಕ್ಷರಾದ ಎ.ಯು. ತಹಸೀಲ್ದಾರ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಸುಧಾ ಮಂಕಣಿ ಹಾಜರಿದ್ದರು.
ವಸ್ತು ಪ್ರದರ್ಶನದಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ತಂತ್ರಜ್ಞಾನ, ನೈಸರ್ಗಿಕ ಕೃಷಿ ತಂತ್ರಜ್ಞಾನ, ಪಶು ಸಂಗೋಪನೆ ತಂತ್ರಜ್ಞಾನ, ಸಿರಿಧಾನ್ಯಗಳು ಹಾಗೂ ಮೌಲ್ಯ ವರ್ಧನೆ, ಸಾವಯವ ಕೃಷಿ ಮಳಿಗೆ ಸೇರಿದಂತೆ ವಿವಿಧ ಮಳಿಗೆಗಳು ಸಾರ್ವಜನಿಕರಿಗೆ ಹಾಗೂ ರೈತರಿಗೆ ಉಪಯುಕ್ತವಾದ ಮಾಹಿತಿಯನ್ನು ಬಿಂಬಿಸುತ್ತಿದ್ದವು.