ವಿಜಯಸಾಕ್ಷಿ ಸುದ್ದಿ, ಗದಗ: ಸಾಹಿತ್ಯ ವಲಯಕ್ಕೆ ಅತ್ಯುತ್ತಮ ಕೃತಿಗಳನ್ನು ನೀಡುವ ಮೂಲಕ ಕನ್ನಡದ ಹಿರಿಮೆಯನ್ನು ಗಡಿಯಾಚೆಗೂ ವಿಸ್ತರಿಸುವ ಕಾರ್ಯವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳು ಮಾಡಿದ್ದಾರೆ. ಅವರ ಕೃತಿಗಳನ್ನು ಓದುವ ಮೂಲಕ ನಮ್ಮ ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಬೇಕೆಂದು ಸಂಸ್ಕೃತಿ ಚಿಂತಕರಾದ ಪ್ರೊ. ಕೆ.ಎಚ್. ಬೇಲೂರ ತಿಳಿಸಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜರುಗಿದ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದರು.
ಸಾಹಿತಿ ತಯಬಅಲಿ ಹೊಂಬಳ ಅವರ ಕಾದಂಬರಿ ‘ಮೊದಲ ಸಹಗಮನ’ ಹಾಗೂ ಮಕ್ಕಳ ಕಥಾ ಸಂಕಲನ ‘ಬಾರೋ ಬಾರೋ ಚಂದ್ರಮ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಡಾ. ಶಿವಪ್ಪ ಕುರಿ, ಬರಹಗಾರನಿಗೆ ಬದ್ಧತೆ ಇರಬೇಕು. ಅಸಹಾಯಕರಿಗೆ, ಅಶಕ್ತರಿಗೆ ದನಿಯಾಗಬೇಕು. ಈ ದಿಸೆಯಲ್ಲಿ ತಯಬಅಲಿ ಅವರು ಪ್ರಚಲಿತ ಸಂದರ್ಭದ ಸಮಸ್ಯೆಗಳಿಗೆ ಅಕ್ಷರರೂಪವನ್ನು ನೀಡಿ ಓದುಗರನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದಾರೆ. ಅವರ ದಣಿವರಿಯದ ಕಾಯಕ ನಿಷ್ಠೆ ನಮಗೆಲ್ಲಾ ಮಾದರಿಯಾದುದು ಎಂದು ತಿಳಿಸಿದರು.
ಮೊದಲ ಸಹಗಮನ ಕೃತಿಯನ್ನು ಪರಿಚಯಿಸಿದ ನೀಲಮ್ಮ ಅಂಗಡಿ, ಇಲ್ಲಿ ವೃದ್ಧಾಪ್ಯದ ಸಂಕಟಗಳನ್ನು ವಿವರಿಸಿದ್ದಾರೆ. ಬದುಕಿನ ಅಂತಿಮ ಸಮಯದಲ್ಲಿ ಹಿರಿಯರಿಗೆ ಬೇಕಾಗಿರುವುದು ಹಿಡಿಯಷ್ಟು ಪ್ರೀತಿ. ಅದರಿಂದ ವಂಚಿತರಾಗಿ ತೊಳಲಾಡುವ ಕುಟುಂಬವೊಂದರ ಸಂದರ್ಭವನ್ನು ಮನಮಿಡಿಯುವಂತೆ ಚಿತ್ರಿಸಿದ್ದಾರೆ ಎಂದು ತಿಳಿಸಿದರು.
ಬಾರೋ ಬಾರೋ ಚಂದ್ರಮ ಕೃತಿಯನ್ನು ಪರಿಚಯಿಸಿ ಮಾತನಾಡಿದ ಕ್ಷಮಾ ವಸ್ತ್ರದ, ಮಕ್ಕಳಿಗೆ ಕತೆಗಳೆಂದರೆ ಪಂಚಪ್ರಾಣ. ನೀತಿಯನ್ನು ನೇರವಾಗಿ ಹೇಳದೇ ಕತೆಗಳ ರೂಪದಲ್ಲಿ ತಿಳಿಸಿದರೆ ಹೆಚ್ಚು ಪರಿಣಾಮ ಬೀರುತ್ತದೆ. ವ್ಯಕ್ತಿತ್ವ ನಿರ್ಮಾಣಕ್ಕೆ ಅವಶ್ಯವಿರುವ ಕತೆಗಳು ಈ ಸಂಕಲನದಲ್ಲಿವೆ. ಮಕ್ಕಳ ಸಾಹಿತ್ಯ ನಿರ್ಲಕ್ಷಕ್ಕೆ ಒಳಗಾಗಿದ್ದು, ಅದರ ಶ್ರೀಮಂತಿಕೆಯನ್ನು ಹೆಚ್ಚಿಸುವ ಕಾರ್ಯವನ್ನು ಲೇಖಕರು ಮಾಡುತ್ತಿದ್ದಾರೆ ಎಂದರು.
ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು. ಕಾರ್ಯಕ್ರಮದಲ್ಲಿ ಚಂದ್ರಶೇಖರ ವಸ್ತ್ರದ, ಡಾ. ಜಿ.ಬಿ. ಪಾಟೀಲ, ಬಸವರಾಜ ಗಿರಿತಿಮ್ಮಣ್ಣವರ, ಎಂ.ಸಿ. ವಗ್ಗಿ, ವಿದ್ಯಾಧರ ದೊಡ್ಡಮನಿ, ಶಶಿಕಾಂತ ಕೊರ್ಲಹಳ್ಳಿ, ಶಿವಾನಂದ ಭಜಂತ್ರಿ, ಕು.ಶಿ. ಜಯದೇವಭಟ್, ವಿ.ಎಸ್. ದಲಾಲಿ, ಕೆ.ಎಸ್. ದಂಡಗಿ, ಶೈಲಶ್ರೀ ಕಪ್ಪರದ, ಕೆ.ಎಸ್. ಬಾಳಿಕಾಯಿ, ಸಿ.ಎಂ. ಮಾರನಬಸರಿ, ರತ್ನಾ ಪುರಂತರ, ಶೈಲಜಾ ಗಿಡ್ನಂದಿ, ರಾಜಶೇಖರ ಕರಡಿ, ಬಿ.ಬಿ. ಹೊಳಗುಂದಿ, ಮಲ್ಲಿಕಾರ್ಜುನ ನಿಂಗೋಜಿ, ಪ್ರಲ್ಹಾದ ನಾರಪ್ಪನವರ, ಕಸ್ತೂರಿ ಕಡಗದ, ಮಂಜುಳಾ ವೆಂಕಟೇಶಯ್ಯ, ರಾಹುಲ ಗಿಡ್ನಂದಿ, ಎಸ್.ಯು. ಸಜ್ಜನಶೆಟ್ಟರ, ಅಶೋಕ ಸತ್ಯರಡ್ಡಿ, ಎಸ್.ಎ. ಬಾಣದ, ಅಶೋಕ ಅಂಗಡಿ, ವಾಯ್.ಕೆ. ಹಂದ್ರಾಳ, ಎಂ.ಸಿ. ಹುಚ್ಚಮ್ಮನವರ, ಎಂ.ಸಿ. ದೊಡ್ಡಮನಿ, ಅಕ್ಕಮ್ಮ ಪಾರ್ವತಿಮಠ, ಸತೀಶ ಕುಲಕರ್ಣಿ, ಮಲ್ಲಪ್ಪ ಡೋಣಿ, ಕೆ.ಜಿ. ವ್ಯಾಪಾರಿ, ಬಸವರಾಜ ನೆಲಜೇರಿ, ಕಿರಣ ಗುಗ್ಗರಿ, ದಾಕ್ಷಾಯಿಣಿ ಗುಗ್ಗರಿ, ದೀಲಿಪಕುಮಾರ ಮುಗಳಿ, ಪಾರ್ವತಿ ಮುಗಳಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಮಕ್ಕಳು ಮತ್ತು ಹಿರಿಯರು ಇಂದು ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಕ್ಕಳು ಬಾಲ್ಯವನ್ನು, ಹಿರಿಯರು ಪ್ರೀತಿಯನ್ನು ಕಳೆದುಕೊಂಡಿದ್ದಾರೆ. ಮಕ್ಕಳ ಬಾಲ್ಯವನ್ನು ಸುಂದರಗೊಳಿಸುವ ಮತ್ತು ಹಿರಿಯರ ಸಂಕಟಗಳನ್ನು ಸಮಾಜದ ಮುಂದಿಡುವ ಪ್ರಯತ್ನವನ್ನು ಈ ಕೃತಿಗಳ ಮೂಲಕ ಮಾಡಿರುವ ತಯಬಅಲಿ ಅವರ ಸಾಹಿತ್ಯ ಸೇವೆ ಮಾದರಿಯಾದುದು ಎಂದು ತಿಳಿಸಿದರು.



