ವಿಜಯಸಾಕ್ಷಿ ಸುದ್ದಿ, ಗದಗ: ಉಪದಾನದ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಗದಗ ಜಿಲ್ಲೆಯ ರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ನೌಕರರ ಸಂಘವು ಗದಗ ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಅವರಿಗೆ ಮನವಿಯನ್ನು ಸಲ್ಲಿಸಿತು.
ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕರು ಹಾಕಿರುವ ಉಪದಾನದ ಪ್ರಕರಣವನ್ನು ಆದ್ಯತಾ ಮೇರೆಗೆ ತ್ವರಿತವಾಗಿ ಇತ್ಯರ್ಥಗೊಳಿಸಬೇಕು. ವಿಳಂಬ ನೀತಿಯಿಂದ ಈಗಾಗಲೇ ನಿವೃತ್ತ ನೌಕರರು ಆರೋಗ್ಯದ ಹಲವು ತೊಂದರೆಯಿಂದ ಬಳಲುತ್ತಿದ್ದಾರೆ. ಬಿಪಿ, ಶುಗರ್‌ನಂತಹ ಖಾಯಿಲೆಗಳಿಂದ ಬಳಲುತ್ತಿರುವ ನಿವೃತ್ತ ಕಾರ್ಮಿಕರಿಗೆ ಸಂಚರಿಸಲು ತೊಂದರೆಯಿದ್ದು, ಜಿಲ್ಲಾ ಕಚೇರಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಗದಗ ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಚ್.ಸಿ. ಕೊಪ್ಪಳ ಹಾಗೂ ಪದಾಧಿಕಾರಿಗಳು ಮನವಿಯಲ್ಲಿ ತಿಳಿಸಿದರು.
ಶೀಘ್ರ ಗತಿಯಲ್ಲಿ ನಿವೃತ್ತ ನೌಕರರ ನ್ಯಾಯಾಲಯದ ಪ್ರಕರಣಗಳನ್ನು ಪರಿಗಣಿಸಿ, ಮಾನವೀಯತೆಯ ದೃಷ್ಟಿಯಿಂದ ಉಪದಾನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ವಿನಂತಿಸಿದರು.
ಮನವಿಗೆ ಸ್ಪಂದಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ನಿವೃತ್ತ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು. ನಿಯೋಗದಲ್ಲಿ ಕಾರ್ಯಾಧ್ಯಕ್ಷ ಹನುಮಂತಪ್ಪ ದೊಡ್ಡಮನಿ, ಕಾರ್ಯದರ್ಶಿ ಆರ್.ಸಿ. ಅಣ್ಣಿಗೇರಿ, ಉಪಾಧ್ಯಕ್ಷ ಬಿ.ಜಿ. ಕೆಂಗಾರಕರ್, ಜಂಟಿ ಕಾರ್ಯದರ್ಶಿ ಜಿ.ಎಮ್. ಮನಿಯಾರ್, ಸುಲೇಮಾನ ಬನ್ನೂರ್, ಮನ್ಸಬ್ದಾರ, ಎಸ್.ಟಿ. ಮುಂಡರಗಿ, ಬಿ.ಕೆ. ಹೊಸಮನಿ, ಮಾನ್ವಿ, ಅಶೋಕ ಕುಮಾರ ಮುಂತಾದವರಿದ್ದರು.