ಅವಧಿ ನುಂಗಿದ ಸದಸ್ಯನ ನೇಮ್ ಪ್ಲೇಟ್!

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 49 ಚರ್ಚಿತ ವಿಷಯಗಳಲ್ಲಿ ಬಹುತೇಕ ವಿಷಯಗಳಿಗೆ ಸಭೆ ಒಪ್ಪಿಗೆ ಸೂಚಿಸಿತು.

Advertisement

ಸಭೆ ಆರಂಭವಾಗುತ್ತಿದ್ದಂತೆಯೇ ಆಸೀನರಾದ ಸದಸ್ಯರೆಲ್ಲರ ಮುಂದೆ ಅವರವರ ಹೆಸರಿನ ನೇಮ್‌ಪ್ಲೇಟ್ ಇರಿಸಲಾಗಿದೆ. ಆದರೆ ನನ್ನ ಹೆಸರಿನ ನೇಮ್ ಪೇಟ್ ಮಾತ್ರ ಏಕೆ ಇರಿಸಿಲ್ಲ, ಉದ್ದೇಶಪೂರ್ವಕವಾಗಿಯೇ ನನ್ನನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದೀರಿ. ನಾನು ಸಭೆಯಿಂದ ಹೊರ ಹೋಗುತ್ತೇನೆ ಎಂದ ಮಹೇಶ ಹೊಗೆಸೊಪ್ಪಿನ ಅವರ ಮಾತಿಗೆ ತಡಕಾಡಿದ ಸಿಬ್ಬಂದಿಗಳು ಅವರ ಹೆಸರಿನ ನಾಮಫಲಕ ತಂದಿಟ್ಟರು. ಆದರೆ ಅದು ಅವರು ಈ ಹಿಂದೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾಗ ಮಾಡಿಸಿದ್ದ ನಾಮಫಲಕವಾಗಿತ್ತು. ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂದರ್ಭದಲ್ಲಿ ಬಹುತೇಕ ಸದಸ್ಯರೂ ಸಹ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಹಿರಿಯ ಸದಸ್ಯ ರಾಜೀವ ಕುಂಬಿ ಮಾತನಾಡಿ, ಯಾವುದೇ ವಿಷಯವಾಗಲಿ ಅಧ್ಯಕ್ಷರನ್ನೊಳಗೊಂಡು ಸರ್ವ ಸದಸ್ಯರನ್ನು ವಿಶ್ವಾಸ, ಸಹಕಾರ ತೆಗೆದುಕೊಂಡು ಕೆಲಸ ಮಾಡುವುದಾದರೆ ಮಾಡಿ ಎಂದರು. ಅದಕ್ಕೆ ಮುಖ್ಯಾಧಿಕಾರಿ ಮಹೇಶ ಹಡಪದ, ಯಾರನ್ನೂ ಅವಮಾನಿಸುವ ಉದ್ದೇಶ ತಮ್ಮದಲ್ಲ. ಇದು ನಮ್ಮ ಸಿಬ್ಬಂದಿಗಳ ತಪ್ಪಿನಿಂದಾಗಿದೆ. ಇನ್ನು ಮುಂದೆ ಅಧ್ಯಕ್ಷರು, ಸರ್ವ ಸದಸ್ಯರ ವಿಶ್ವಾಸ, ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತೇನೆ ಎಂದರು.

ಪುರಸಭೆಯ ಅಂಗ ಶಿಕ್ಷಣ ಸಂಸ್ಥೆ ಉಮಾ ವಿದ್ಯಾಲಯ ಹೈಸ್ಕೂಲ್ ಮೈದಾನಕ್ಕೆ ಹೊಂದಿಕೊಂಡಿರುವ 2 ಎಕರೆ 34 ಗುಂಟೆ ಜಮೀನಿನಲ್ಲಿ ಪ್ರಜಾಸೌಧ ನಿರ್ಮಿಸಲು ಒಪ್ಪಿಗೆ ಸೂಚಿಸುವ ವಿಷಯಕ್ಕೆ ಸಂಬಂಧಿಸಿದಂತೆ ಈ ಸ್ಥಳದಲ್ಲಿ ಕ್ರೀಡಾಂಗಣವಾಬೇಕು ಎಂಬ ಬಗ್ಗೆ ಈ ಹಿಂದಿನಿಂದಲೂ ಮತ್ತು ಇತ್ತೀಚಿನ ದಿನಗಳಲ್ಲಿ ಕ್ರೀಡಾಭಿಮಾನಿಗಳು, ಸಂಘಟನೆಗಳು ಮನವಿ ಸಲ್ಲಿಸಿವೆ. ಪ್ರಜಾಸೌಧ ನಿರ್ಮಾಣಕ್ಕೆ ಬೇರೆಡೆ ಸ್ಥಳ ಖರೀದಿಸಬೇಕು. ಇಲ್ಲವೇ ಈ ಪ್ರದೇಶಕ್ಕೆ ಹೊಂದಿಕೊಂಡಿರುವ ಜಮೀನನ್ನು ಖರೀದಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ಮಹೇಶ ಹೊಗೆಸೊಪ್ಪಿನ, ರಾಜೀವ ಕುಂಬಿ ಮುಖ್ಯಾಧಿಕಾರಿಗಳಿಗೆ ಸಲಹೆ ನೀಡಿದರು.

ಆದರೆ ಈ ಸರ್ವೇ ನಂಬರಿನ ಭೂಮಿ ಕಂದಾಯ ಇಲಾಖೆಗೆ ಸೇರಿದ್ದರಿಂದ ಈಗಾಗಲೇ ಶಾಸಕರು, ಮಾಜಿ ಶಾಸಕರು, ಉಪವಿಭಾಗಾಧಿಕಾರಿಗಳನ್ನೊಳಗೊಂಡು ಸ್ಥಳ ಪರಿಶೀಲಿಸಿ ಪ್ರಜಾಸೌಧ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಗಮನಾರ್ಹ. ಆದಾಗ್ಯೂ ಈ ಚರ್ಚೆ ಎಷ್ಟರ ಮಟ್ಟಿಗೆ ಸರಿ ಎಂಬ ಮಾತುಗಳು ಸದಸ್ಯರೊಳಗೆ ಚರ್ಚಿತವಾದವು.

ಸಭೆಯಲ್ಲಿ ಇತ್ತಿಚೇಗೆ ನಿಧನರಾದ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಾರ್ಡ್ ನಂ-13ರ ಉಪಚುನಾವಣೆಯಲ್ಲಿ ಅವಿರೋಧ ಆಯ್ಕೆಗೊಂಡ ಸದಸ್ಯೆ ಶೋಭಾ ಬಸವರಾಜ ಮೆಣಸಿನಕಾಯಿ ಹಾಗೂ ಸರಕಾರದಿಂದ ನಾಮನಿದೇಶಿತಗೊಂಡ ಸದಸ್ಯರಾದ ನೀಲಪ್ಪ ಪೂಜಾರ, ಶಿವಪ್ರಕಾಶ ಕೊಂಚಿಗೇರಿಮಠ, ಕಿರಣ ನವಲೆ, ಮಹಾಂತೇಶ ಗುಡಿಸಲಮನಿ, ವಾಸೀಂಅಕ್ರಮ್ ಮುಚ್ಚಾಲೆ ಅವರು ಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಪುರಸಭೆಯ ಸರ್ವ ಸದಸ್ಯರು, ಮುಖ್ಯಾಧಿಕಾರಿ ಮಹೇಶ ಹಡಪದ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಶೋಭಾ ಬೆಳ್ಳಿಕೊಪ್ಪ, ಇಂಜಿನಿಯರ್ ವಿರೇಂದ್ರಸಿಂಗ್ ಕಾಟೇವಾಲೆ, ಹನುಮಂತ ನಂದೆಣ್ಣವರ ಸೇರಿದಂತೆ ಅನೇಕರಿದ್ದರು.

ಪುಲಿಗೆರೆಯ ಸಾರಸ್ವತ ಲೋಕಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ದಿ. ಪ್ರೊ. ಸಿ.ವಿ ಕೆರಿಮನಿ ಅವರು ವಾಸಿಸುವ ವಿನಾಯಕನಗರದ ಬಡಾವಣೆಯ 2ನೇ ಮುಖ್ಯ ರಸ್ತೆಗೆ ಅವರ ಹೆಸರಿಡುವ ಬಗ್ಗೆ ಕಸಾಪ ತಾಲೂಕು ಘಟಕ, ಸಾಹಿತಿಗಳು, ಸಾರ್ವಜನಿಕರಿಂದ ಬಂದ ಮನವಿಗೆ ಸಭೆಯ ಸರ್ವಸದಸ್ಯರು ಸಂತೋಷದಿಂದ ಸರ್ವಾನುಮತದ ಒಪ್ಪಿಗೆ ಸೂಚಿಸಿದರು.

**ಬಾಕ್ಸ್**

ಸಭೆಯಲ್ಲಿ ಪುರಸಭೆಯ ಉಮಾ ಮಹಾವಿದ್ಯಾಲಯದ ಶತಮಾನೋತ್ಸವ ಆಚರಿಸುವದು, ಪುರಸಭೆ ಐಡಿಎಸ್‌ಎಂಟಿ ಮಳಿಗೆಗಳ ದುರಸ್ಥಿ, ಬೀದಿ ದೀಪ ನಿರ್ವಹಣೆ, ತುಂಗಭದ್ರಾ ನೀರು ಶುದ್ಧೀಕರಣ ಘಟಕದ ನಿರ್ವಹಣೆ, ಸ್ವಚ್ಛತೆ ಸೇರಿ ಅಭಿವೃದ್ಧಿ ಕಾರ್ಯಗಳನ್ನೊಳಗೊಂಡು 49ಕ್ಕೂ ಅಧಿಕ ವಿಷಯಗಳ ಕುರಿತು ಚರ್ಚಿಸಿ ನಿರ್ಧರಿಸಲಾಯಿತು.


Spread the love

LEAVE A REPLY

Please enter your comment!
Please enter your name here