ಶಿಲ್ಲಾಂಗ್: ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದ ಇಂದೋರ್ ದಂಪತಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತಿಯ ಕೊಲೆಗೆ ಸಂಚು ರೂಪಿಸಿದ ಆರೋಪದಡಿ ಉತ್ತರ ಪ್ರದೇಶದ ಗಾಜಿಪುರದಲ್ಲಿ ಪತ್ನಿಯನ್ನು ಅರೆಸ್ಟ್ ಮಾಡಿದ್ದಾರೆ. ಪತ್ನಿ ಸೋನಮ್ ರಘುವಂಶಿ ಸೇರಿ ನಾಲ್ವರನ್ನು ಅರೆಸ್ಟ್ ಮಾಡುಲಾಗಿದ್ದು,
ರಾಜಾ ರಘುವಂಶಿ (30) ಹತ್ಯೆಯಾದ ವ್ಯಕ್ತಿಯಾಗಿದ್ದಾನೆ. ಸೋನಮ್ ಕೊಲೆಗಾರರನ್ನು ನೇಮಿಸಿಕೊಂಡು ಹನಿಮೂನ್ ಸಮಯದಲ್ಲಿ ತನ್ನ ಪತಿಯ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಮೇಘಾಲಯ ಡಿಜಿಪಿ ಇದಶಿಶಾ ನೊಂಗ್ರಾಂಗ್ ಹೇಳಿದ್ದಾರೆ.
ಮೇ 23ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ಆಗಮಿಸಿದ್ದ ದಂಪತಿ, ಮಳೆಯಲ್ಲಿ ಸಮೃದ್ಧಿಯಾದ ಬೆಟ್ಟದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಚಿರಾಪುಂಜಿಗೆ ಬಂದಿದ್ದರು. ಈ ವೇಳೆ ಇಬ್ಬರೂ ನಾಪತ್ತೆಯಾಗಿದ್ದರು.
ಈ ಸಂಬಂಧ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರಿಗೆ ಆಳವಾದ ಕಂದಕದಲ್ಲಿ ಮೃತದೇಹವೊಂದು ಸಿಕ್ಕಿದ್ದು, ಕೈಯಲ್ಲಿದ್ದ ಟ್ಯಾಟೂ ನೋಡಿ ಇದು ಮೃತ ರಘುವಂಶಿಯದ್ದೇ ಎಂದು ಪತ್ತೆ ಮಾಡಲಾಗಿತ್ತು. ಪತ್ನಿಯ ದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗಲೇ ಸ್ಥಳೀಯ ಗೈಡ್‌ವೊಬ್ಬರ ಹೇಳಿಕೆ ಪ್ರಕರಣಕ್ಕೆ ರೋಚಕ ತಿರುವು ನೀಡಿತ್ತು.
ಮಧ್ಯಪ್ರದೇಶದಿಂದ 4 ಮಂದಿ ಹಂತಕರು ಮೇಘಾಲಯಕ್ಕೆ ಬಂದು ಕೃತ್ಯ ನಡೆಸಲಾಗಿದೆ. ಈ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ರಾಜಾ ರಘುವಂಶಿ ಮುಗಿಸಿ ಬಳಿಕ ಆರೋಪಿ ಸೋನಂ ನಾಪತ್ತೆಯಾಗಿದ್ದಳು. ಜೂನ್, 2 ರಂದು ಮೃತದೇಹ ಸಿಕ್ಕಿದ ಮೇಲೆ, ಪೊಲೀಸರಿಗೆ ಸೋನಂ ಮೇಲೆ ಅನುಮಾನ ಕಾಡಿತ್ತು. ಅಲ್ಲದೇ ಪ್ರವಾಸಿ ಗೈಡ್ಗಳ ವಿಚಾರಣೆಯಲ್ಲಿ ಈ ಜೋಡಿ ಮೂವರು ಪುರುಷರ ಜೊತೆ ಇರೋದಾಗಿ ತಿಳಿದುಬಂದಿತ್ತು.