ಬಾಗಲಕೋಟೆ:- ಇತ್ತೀಚೆಗೆ ನಡೆದಿದ್ದ ಹೇರ್ ಡ್ರೈಯರ್ ಬ್ಲಾಸ್ಟ್ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು, ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಕೊಲೆಗಾಗಿ ಸಂಚು ರೂಪಿಸಿರೋದು ತಿಳಿದು ಬಂದಿದೆ.
ಘಟನೆ ಸಂಬಂಧ ಓರ್ವ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತನನ್ನು ಸಿದ್ದಪ್ಪ ಶೀಲವಂತ ಎಂದು ಗುರುತಿಸಲಾಗಿದೆ.
ಜಿಲ್ಲೆಯ ಇಳಕಲ್ ನಗರದಲ್ಲಿ ನವೆಂಬರ್ 15 ರಂದು ಹೇರ್ ಡ್ರೈಯರ್ ಬ್ಲಾಸ್ಟ್ ಆಗಿ, ಮೃತ ಯೋಧನ ಪತ್ನಿ ಬಸವರಾಜೇಶ್ವರಿ ಯರನಾಳ ಎರಡು ಮುಂಗೈ ಕಟ್ ಆಗಿದ್ದವು. ಕೇವಲ ಹೇರ್ ಡ್ರೈಯರ್ ಬ್ಲಾಸ್ಟ್ನಿಂದ ಇಷ್ಟೊಂದು ಭೀಕರ ಸ್ಫೋಟ ಹೇಗೆ ಎಂದು ಅಚ್ಚರಿಯಾಗಿತ್ತು. ಜೊತೆಗೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ತನಿಖೆಯ ಗಂಭೀರತೆ ಅರಿತ ಇಳಕಲ್ ನಗರ ಠಾಣೆ ಪೊಲೀಸರು ಎರಡೇ ದಿನದಲ್ಲಿ ಪ್ರಕರಣ ಭೇದಿಸಿದ್ದಾರೆ. ಆ ಮೂಲಕ ಬ್ಲಾಸ್ಟ್ ಹಿಂದೆ ಲವ್ ಸ್ಟೋರಿ ಇರುವುದು ಬಹಿರಂಗವಾಗಿದೆ.
ಬಸವರಾಜೇಶ್ವರಿ ಹಾಗೂ ಸಿದ್ದಪ್ಪ ಶೀಲವಂತರ ಮಧ್ಯೆ ಪ್ರೀತಿ ಇತ್ತು. ಇದಕ್ಕೆ ಬಸವರಾಜೇಶ್ವರಿ ಸ್ನೇಹಿತೆ ಶಶಿಕಲಾ ಅಡ್ಡಿಯಾಗಿದ್ದಳು. ಇದು ಸರಿಯಲ್ಲ ಎಂದು ಹೇಳಿದ್ದಳು. ನಂತರ ಬಸವರಾಜೇಶ್ವರಿ ಸಿದ್ದಪ್ಪ ಜೊತೆ ಮಾತಾಡೋದನ್ನು ಬಿಟ್ಟಿದ್ದಳು. ಇದಕ್ಕೆಲ್ಲ ಕಾರಣ ಶಶಿಕಲಾ, ಆಕೆಯನ್ನೇ ಮುಗಿಸೋಣ ಎಂದ ಸಿದ್ದಪ್ಪ ಗ್ರಾನೈಟ್ ಡೆಟೊನೇಟರ್ ಡ್ರೈಯರ್ನಲ್ಲಿ ಅಳವಡಿಸಿ ಶಶಿಕಲಾ ಅವರಿಗೆ ಕೊರಿಯರ್ ಮಾಡಿದ್ದ. ಆದರೆ ಅದನ್ನು ರಿಸೀವ್ ಮಾಡಿದ ಪ್ರೇಯಸಿ ಬಸವರಾಜೇಶ್ವರಿ ಕೈ ಕಳೆದುಕೊಳ್ಳುವಂತಾಗಿದೆ.
ಈ ಸಂಬಂಧ ಮಾತನಾಡಿದ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠ ಅಮರನಾಥ ರೆಡ್ಡಿ, ‘ಕೊಲೆಗೆ ಯತ್ನಿಸಿದ ಸಿದ್ದಪ್ಪ ಶೀಲವಂತ ಎಂಬುವವರನ್ನು ಪೊಲೀಸರು ಬಂಧಿಸಿದ್ದೇವೆ’ ಎಂದರು.
ಹೇರ್ ಡ್ರೈಯರ್ ಸ್ಫೋಟಗೊಂಡು ಗಾಯಗೊಂಡಿರುವ ಬಸವರಾಜೇಶ್ವರಿ ಯರನಾಳ, ಕೊಲೆಗೆ ಸಂಚು ರೂಪಿಸಿದ್ದ ಸಿದ್ದಪ್ಪ ಶೀಲವಂತ ಕುಷ್ಟಗಿ ತಾಲ್ಲೂಕಿನ ಪುರತಗೇರಿಯವರು. ಅವರಿಬ್ಬರಿಗೆ ಮದುವೆಗೆ ಮೊದಲೇ ಪರಿಚಯವಿತ್ತು. ಅವರ ಪತಿ ನಿಧನದ ನಂತರ ಮತ್ತೆ ಸಂಪರ್ಕಕ್ಕೆ ಬಂದಿದ್ದರು. ಇಳಕಲ್‌ನಲ್ಲಿದ್ದ ಅವರ ಮನೆಗೆ ಹೋಗುತ್ತಿದ್ದನ್ನು, ತಮ್ಮಿಬ್ಬರ ನಡುವೆ ಸಂಬಂಧವಿತ್ತು ಎಂಬುದನ್ನು ಸಿದ್ದಪ್ಪ ಒಪ್ಪಿಕೊಂಡಿದ್ದಾನೆ’ ಎಂದು ತಿಳಿಸಿದರು.
‘ಬಸವರಾಜೇಶ್ವರಿ, ಶಶಿಕಲಾ ಇಬ್ಬರ ಪತಿ ಸೇನೆಯಲ್ಲಿದ್ದರು. ಇಬ್ಬರ ಪತಿಯೂ ಮೃತರಾಗಿದ್ದಾರೆ. ಸೈನಿಕ ಕಲ್ಯಾಣ ಮಂಡಳಿಗೆ ಹೋದಾಗ ಇಬ್ಬರಿಗೆ ಪರಿಚಯವಾಗಿ, ಸ್ನೇಹಿತೆಯರಾಗಿದ್ದರು. ಸಿದ್ದಪ್ಪ ಅವರನ್ನು ಅಲ್ಲಿಯೇ ಬಸವರಾಜೇಶ್ವರಿ, ಶಶಿಕಲಾಗೆ ಪರಿಚಯಿಸಿದ್ದರು’ ಎಂದರು.
ಸಿದ್ದಪ್ಪನೊಂದಿಗೆ ಸಂಬಂಧ ಒಳ್ಳೆಯದಲ್ಲ. ಅದನ್ನು ಬಿಟ್ಟು ಬಿಡುವಂತೆ ಶಶಿಕಲಾ, ಬಸವರಾಜೇಶ್ವರಿಗೆ ಸಲಹೆ ನೀಡಿದ್ದರು. ಅದರಂತೆ ಸಿದಪ್ಪ ಅವರನ್ನು ದೂರ ಇಡಲಾರಂಭಿಸಿದರು. ಇದರಿಂದ ಸಿಟ್ಟಿಗೆದ್ದು ಶಶಿಕಲಾ ಅವರನ್ನು ಕೊಲೆ ಮಾಡಲು ಸಿದ್ದಪ್ಪ ಸಂಚು ರೂಪಿಸಿದ್ದ’ ಎಂದು ವಿವರಿಸಿದರು.
‘ದಾಲ್ಫಿನ್ ಗ್ರಾನೈಟ್ಸ್ ಕಂಪನಿಯಲ್ಲಿ ಸೂಪರ್‌ವೈಸರ್ ಆಗಿದ್ದ ಸಿದ್ದಪ್ಪ, ಅಲ್ಲಿ ಕಲ್ಲು ಸ್ಫೋಟಿಸಲು ಇಟ್ಟಿದ್ದ ಡಿಟೊನೇಟರ್ ತಂದಿದ್ದ. ಅದನ್ನು ಹೇರ್ ಡ್ರೈಯರ್‌ಗೆ ಜೋಡಿಸಿ, ಅದನ್ನು ಬಾಗಲಕೋಟೆಯ ಡಿಟಿಡಿಸಿ ಕೋರಿಯರ್‌ನಿಂದ ಶಶಿಕಲಾಗೆ ಕಳುಹಿಸಿದ್ದರು. ಊರಿನಲ್ಲಿಲ್ಲದ್ದರಿಂದ ಬಸವರಾಜೇಶ್ವರಿಗೆ ತರಲು ಶಶಿಕಲಾ ತಿಳಿಸಿದ್ದಳು’ ಎಂದರು.
‘ಕೊರಿಯರ್ ತಂದಿದ್ದ ಬಸವರಾಜೇಶ್ವರಿ ಮನೆಯಲ್ಲಿರಿಸಿದ್ದರು. ಶಾಲೆಯಿಂದ ಮಕ್ಕಳು, ಕೊರಿಯರ್ ಓಪನ್ ಮಾಡಿ ಏನು ಬಂದಿದೆ ನೋಡುವಂತೆ ಕೇಳಿದಾಗ ಅದನ್ನು ಓಪನ್ ಮಾಡಲಾಗಿತ್ತು. ಹೇರ್ ಡ್ರಯರ್ ಇದ್ದದ್ದರಿಂದ ಆನ್ ಮಾಡಲು ಪ್ಲಗ್ ಹಾಕಿ, ಸ್ವಿಚ್ ಆನ್ ಮಾಡುತ್ತಿದ್ದಂತೆಯೇ ಸ್ಫೋಟಗೊಂಡು ಎರಡೂ ಕೈ ಬೆರಳುಗಳು ಛಿದ್ರಗೊಂಡಿವೆ’ ಎಂದು ತಿಳಿಸಿದರು.