ಬೆಂಗಳೂರು: ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಪತ್ತೆಯಾದ ಸ್ಫೋಟಕಗಳ ಪ್ರಕರಣದಲ್ಲಿ ಪೊಲೀಸರು ಕೋಲಾರ ಮೂಲದ ಮೂವರನ್ನು ಬಂಧಿಸಿದ್ದಾರೆ. ಗಣೇಶ್, ಮುನಿರಾಜ್ ಮತ್ತು ಶಿವಕುಮಾರ್ ಬಂಧಿತ ಆರೋಪಿಗಳಾಗಿದ್ದು,
ಬಂಧಿತರಿಂದ 22 ಜಿಲೆಟಿನ್ ಜೆಲ್, 30 ಡಿಟೋನೇಟರ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಕೆಲವು ಆರೋಪಿಗಳ ಪತ್ತೆಗಾಗಿ ಪೊಲೀಸರಿಂದ ಹುಡುಕಾಟ ನಡೆದಿದೆ. ಇನ್ನು ಬಂಧಿತ ಆರೋಪಿಗಳ ವಿಚಾರಣೆ ವೇಳೆ ಕೆಲವು ಮಾಹಿತಿ ಬಹಿರಂಗಗೊಂಡಿವೆ. ಆರೋಪಿಗಳು ಸ್ಫೋಟಕಗಳನ್ನು ಬ್ಯಾಗ್ನಲ್ಲಿ ತೆಗೆದುಕೊಂಡು ಬಂದಿದ್ದಾರೆ.
ನಂತರ ಬಸ್ ನಿಲ್ದಾಣದಲ್ಲಿರು ಶೌಚಾಲಯಕ್ಕೆ ತೆರಳಿದ್ದು, ಬ್ಯಾಗ್ಗಳನ್ನು ಹೊರಗಡೆ ಇಟ್ಟು ಹೋಗಿದ್ದಾರೆ. ಈ ವೇಳೆ ಹೊರ ಬಂದಾಗ ಅಲ್ಲಿ ಹೋಮ್ ಗಾರ್ಡ್ಸ್ ಇರುವುದನ್ನು ನೋಡಿ ಬೆದರಿ ಅಲ್ಲಿಯೇ ಬ್ಯಾಗ್ ಬಿಟ್ಟು ಹೋಗಿದ್ದಾರೆ ಎನ್ನುವ ಮಾಹಿತಿ ಪತ್ತೆಯಾಗಿದೆ.
ಕೋಲಾರದಲ್ಲಿ ಜಿಲೆಟಿನ್ ಕಡ್ಡಿಗಳನ್ನು ಖರೀದಿಸಿದ್ದಾರೆ. ಆರೋಪಿಗಳು ಸ್ಫೋಟಕಗಳನ್ನು ಕೊಳ್ಳೆಗಾಲದಲ್ಲಿ ಬೋರ್ವೆಲ್ ಮತ್ತು ಗುಂಡಿಯಲ್ಲಿ ಬಂಡೆ ಒಡೆಯಲು ಬಳಸಲು ತೆಗೆದುಕೊಂಡು ಹೋಗುತ್ತಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.