ಕನ್ನಡಿಗ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಿ: ಕರವೇ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ ಆಗ್ರಹ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಐತಿಹಾಸಿಕ ಜಗದ್ಗುರು ಶ್ರೀ ತೋಂಟದಾರ್ಯ ಮಠದ ಜಾತ್ರೆ ಪ್ರತಿ ವರ್ಷ ಅದ್ದೂರಿಯಾಗಿ ನಡೆಯುತ್ತದೆ. ಅದರಂತೆ ಈ ವರ್ಷವೂ ಕೂಡ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಲು ಜಾತ್ರಾ ಮಹೋತ್ಸವದ ಕಮಿಟಿ ತೀರ್ಮಾನಿಸಿದೆ. ಎರಡು ತಿಂಗಳಿಗೂ ಹೆಚ್ಚು ಕಾಲ ನಡೆಯುವ ಈ ಜಾತ್ರೆಯಲ್ಲಿ ದೇಶದ ಹಲವು ರಾಜ್ಯಗಳಿಂದ ವ್ಯಾಪಾರಸ್ಥರು ಆಗಮಿಸುತ್ತಾರೆ. ಆದರೆ ವ್ಯಾಪಾರ ಮಳಿಗೆ ಹಾಕಲು ಸ್ಥಳೀಯ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ ಆಗ್ರಹಿಸಿದರು.

Advertisement

ಈ ಕುರಿತು ಸೋಮವಾರ ತಹಸೀಲ್ದಾರ ಹಾಗೂ ಗದಗ ಶಹರ ಪೊಲೀಸರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿ, ತೋಂಟದಾರ್ಯ ಜಾತ್ರೆಯಲ್ಲಿ ಉತ್ತರ ಭಾರತದ ಹಿಂದಿವಾಲಾಗಳೇ ಹೆಚ್ಚು ತುಂಬಿಕೊಂಡಿರುತ್ತಾರೆ. ಜಾತ್ರಾ ಕಮಿಟಿಯವರು ಅವರಿಗೆ ವ್ಯಾಪಾರ ಮಾಡಲು ಅನುಮತಿಯನ್ನು ನೀಡಬಾರದು. ಬದಲಾಗಿ ನಮ್ಮ ಕನ್ನಡಿಗರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು. ನಮ್ಮ ಮನವಿಯನ್ನು ಧಿಕ್ಕರಿಸಿದರೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ನಿಂಗನಗೌಡ ಮಾಲಿಪಾಟೀಲ್, ವಿನಾಯಕ, ವಿರೂಪಾಕ್ಷಪ್ಪ ಹಿತ್ತಲಮನಿ, ಕುಮಾರ್ ದ್ಯಾವಣ್ಣವರ್, ಪ್ರಕಾಶ ನಂದಿಗವಾಡ, ತೌಸಿಪ್ ಡಾಲಾಯತ್, ಗೌಸ್ ಶಿರಹಟ್ಟಿ, ಮುತ್ತಣ್ಣ ಚೌಡಣ್ಣನವರ್, ದಾವಲಸಾಬ್ ತಹಸೀಲ್ದಾರ್, ಮುಸ್ತಾಕ್, ಸಲೀಂ, ಶಬ್ಬೀರ್, ದ್ಯಾಮಣ್ಣ ಈಳಗೇರ, ಇರ್ಫಾನ್ ನದಾಫ್, ಸಾಧಿಕ್, ಸಿರಾಜ್ ಹೊಸಮನಿ, ಅಲ್ತಾಫ್, ಶ್ರೀಕಾಂತ ಪೂಜಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನಮ್ಮ ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎನ್ನುವುದು ನಮ್ಮ ಮೊದಲ ಆದ್ಯತೆಯಾಗಿದೆ. ಅದನ್ನು ಹೊರತುಪಡಿಸಿ ಬೇರೆ ರಾಜ್ಯದ ವ್ಯಾಪಾರಿಗಳು ವ್ಯಾಪಾರಕ್ಕೆ ಬಂದರೆ ನಮ್ಮ ವಿರೋಧವಿದೆ. ಹಿಂದೆ ಬ್ರಿಟಿಷರು ಕೂಡ ವ್ಯಾಪಾರಕ್ಕೆಂದು ಆಗಮಿಸಿ ಎರಡು ಶತಮಾನಕ್ಕೂ ಹೆಚ್ಚು ಕಾಲ ನಮ್ಮನ್ನು ಆಳಿದ್ದರು. ಅದೇ ರೀತಿ ನಮ್ಮ ನಾಡಿನಲ್ಲಿ ಬೇರೆ ರಾಜ್ಯದ ವ್ಯಾಪಾರಸ್ಥರಿಗೆ ಅವಕಾಶ ಕಲ್ಪಿಸಿದರೆ ಮುಂದೊಂದು ದಿನ ಕರ್ನಾಟಕ ರಾಜ್ಯದ ವ್ಯಾಪಾರಸ್ಥರು ಬೀದಿಗೆ ಬರಬೇಕಾಗುತ್ತದೆ. ಇದನ್ನು ಮನಗಂಡು ಉತ್ತರ ಭಾರತದ ವ್ಯಾಪಾರಸ್ಥರಿಗೆ ಅದರಲ್ಲಿಯೂ ಹಿಂದಿವಾಲಾಗಳಿಗೆ ಮಣೆ ಹಾಕಬಾರದು ಎಂದು ಹನುಮಂತಪ್ಪ ಅಬ್ಬಿಗೇರಿ ಆಗ್ರಹಿಸಿದರು.


Spread the love

LEAVE A REPLY

Please enter your comment!
Please enter your name here