ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜಾತ್ರಾ ಮಹೋತ್ಸವಗಳು, ಧರ್ಮ ಜಾಗೃತಿ ಸಭೆಗಳು ಜಾತಿ-ಧರ್ಮಗಳ ಎಲ್ಲೆ ಮೀರಿ ಜನರಲ್ಲಿ ದೇವರು, ಧರ್ಮ, ಸಂಸ್ಕೃತಿ, ಮಾನವೀಯ ಮೌಲ್ಯಗಳನ್ನು ಬಿತ್ತುವ ಮತ್ತು ಸಮಾನತೆ, ಸಹಬಾಳ್ವೆ, ಸ್ನೇಹ, ಬಾಂಧವ್ಯ, ಭ್ರಾತೃತ್ವದ ಮನೋಭಾವ ಮೂಡಿಸುವಲ್ಲಿ ಪ್ರೇರಣೆಯಾಗುತ್ತವೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಅವರು ಸೋಮವಾರ ಲಕ್ಷ್ಮೇಶ್ವರ ಸಮೀಪದ ಗುಲಗಂಜಿಕೊಪ್ಪ ಗ್ರಾಮ ವ್ಯಾಪ್ತಿಯ ಶ್ರೀ ದುಂಡಿಬಸವೇಶ್ವರ ಜಾತ್ರಾ ಮಹೋತ್ಸವ, ನೂತನ ರಥೋತ್ಸವ ಮತ್ತು ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಧರ್ಮ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಗೆ ಭಕ್ತರ ಸಹಾಯ-ಸಹಕಾರ ಅಗತ್ಯ. ದೇವಸ್ಥಾನ, ಮಠ-ಮಾನ್ಯಗಳಿಗೆ ಕೊಡುವ ದಾನ, ಧರ್ಮಗಳು ನಿಮ್ಮ ಮೂಲಕ ಸಮಾಜಕ್ಕೆ ತಲುಪುತ್ತವೆ. ದೇವಸ್ಥಾನ, ಧರ್ಮ ಕಾರ್ಯಗಳು ನಮ್ಮನ್ನು ಸನ್ಮಾರ್ಗದತ್ತ ನಡೆಸಿ ಶಾಂತಿ, ನೆಮ್ಮದಿ, ಸಮೃದ್ಧಿ ಕೊಡುತ್ತವೆ. ಅತ್ಯಂತ ಪವಿತ್ರ ಮತ್ತು ಜಾಗೃತ ಸ್ಥಳವಾಗಿರುವ ಶ್ರೀ ದುಂಡಿಬಸವೇಶ್ವರ ದೇವಸ್ಥಾನ ಸಮಿತಿಯವರು ಪ್ರತಿವರ್ಷ ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಲೋಕಕಲ್ಯಾಣಕ್ಕಾಗಿ ಹೋಮ-ಹವನ, ರಕ್ತದಾನ ಶಿಬಿರ, ಸಂಗೀತ, ಪ್ರಸಾದ ಸೇವೆ, ಗುರುಗಳಿಂದ ಧರ್ಮ ಸಂದೇಶ ನೀಡುವಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಗಂಜಿಗಟ್ಟಿಯ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಕರೇವಾಡಿಮಠದ ಮಳೆಮಲ್ಲಿಕಾರ್ಜುನ ಶ್ರೀಗಳು, ಹೂವಿನಶಿಗ್ಲಿಯ ಚನ್ನವೀರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗ್ರಾ.ಪಂ ಅಧ್ಯಕ್ಷ ಕರಿಯಪ್ಪಗೌಡ ಹೊಸಗೌಡ್ರ, ಸಿದ್ದನಗೌಡ ಬಳ್ಳೊಳ್ಳಿ, ನೀಲಪ್ಪಗೌಡ ದುರಗನಗೌಡ್ರ, ನಿಂಗನಗೌಡ ಹೊಸಗೌಡ್ರ, ಸುಧಾ ಮಾದರ, ಪ್ರೇಮವ್ವ ರಾಯಣ್ಣವರ, ದುಂಡಪ್ಪ ರಾಯಣ್ಣವರ, ನಾಗರಾಜ ದ್ಯಾಮನಕೊಪ್ಪ, ನಿಂಗನಗೌಡ ಹೊಸಮನಿ, ನಿಂಗಪ್ಪ ಶಿವಬಸಣ್ಣವರ, ಆರ್.ಸಿ. ಪಾಟೀಲ, ಮಲ್ಲೇಶ ದೂಳಮ್ಮನವರ ಸೇರಿ ಹಿರಿಯರು ಉಪಸ್ಥಿತರಿದ್ದರು.
ಜಾತ್ರಾಮಹೋತ್ಸವ ಅಂಗವಾಗಿ ಹುಬ್ಬಳ್ಳಿಯ ಆರ್.ಬಿ. ಪಾಟೀಲ ಕ್ಯಾನ್ಸರ್ ಆಸ್ಪತ್ರೆಯ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆಯಿತು. ಅಣ್ಣಪ್ಪ ರಾಮಗೇರಿ ಪ್ರಾಸ್ತಾವಿಕ ಮಾತನಾಡಿದರು. ಸಂಜೆ ನೂತನ ರಥೋತ್ಸವ ಅಪಾರ ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ನೆರವೇರಿತು.
ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಅರಣ್ಯ ಪ್ರದೇಶದಲ್ಲಿದ್ದ ದುಂಡಿ ಬಸವೇಶ್ವರ ದೇವಸ್ಥಾನವನ್ನು ನೊಣವಿನಕೆರೆ ಶ್ರೀಗಳು ಸಾಕಷ್ಟು ಅಭಿವೃದ್ಧಿಪಡಿಸಿ ಧರ್ಮಕ್ಷೇತ್ರವನ್ನಾಗಿ ಮಾಡಿದ್ದಾರೆ. ಈಗ ಮುಕ್ತಿ ಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನೆಯ ಕಾರ್ಯ ಭರದಿಂದ ಸಾಗಿದ್ದು, ಈ ಪರಮ ಶ್ರೇಷ್ಠ ಕಾರ್ಯ ಪೂರ್ಣಗೊಂಡ ನಂತರ ಈ ಕ್ಷೇತ್ರವೂ ಮಹತ್ವ ಪಡೆದುಕೊಳ್ಳಲಿದೆ. ಧರ್ಮದ ಕಾರ್ಯದಿಂದ ಬದುಕು ಸುಂದರವಾಗುತ್ತದೆ. ಕೈಲಾದ ಮಟ್ಟಿನ ಅಳಿಲು ಸೇವೆ ಮಾಡೋಣ ಎಂದರು.


