ವಿಜಯಸಾಕ್ಷಿ ಸುದ್ದಿ, ರೋಣ : ನಿವೇಶನ ಪಡೆದು ಮನೆಗಳನ್ನು ಕಟ್ಟಿಕೊಂಡಿರುವ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ಅತಿ ಶೀಘ್ರದಲ್ಲಿ ಅವರ ಹೆಸರಿನಲ್ಲಿ ಉತಾರ ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಮಂಗಳವಾರ ಸಂಜೆ ಪುರಸಭೆಯ ಸಭಾಭವನದಲ್ಲಿ ಜರುಗಿದ ರೋಣ, ನರೆಗಲ್ಲ, ಗಜೇಂದ್ರಗಡ ಆಶ್ರಯ ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಈಗಾಗಲೇ ರೋಣ, ನರೆಗಲ್ಲ, ಗಜೇಂದ್ರಗಡ ಪಟ್ಟಣಗಳಲ್ಲಿ ನಿವೇಶನ ಹಾಗೂ ಮನೆಗಳ ಹಂಚಿಕೆಯಲ್ಲಿ ತಾರತಮ್ಯವಾಗಿರುವ ಬಗ್ಗೆ ದೂರುಗಳು ಬಂದಿರುವುದು ಎಲ್ಲರ ಗಮನಕ್ಕಿದೆ. ಈ ಬಾರಿ ಹಾಗಾಗದ ರೀತಿಯಲ್ಲಿ, ನ್ಯಾಯ ಸಮ್ಮತವಾಗಿ ಅರ್ಹ ಪಲಾನುಭವಿಗಳಿಗೆ ನಿವೇಶನ ಮತ್ತು ಮನೆಗಳ ಹಂಚಿಕೆಯನ್ನು ಮಾಡಬೇಕು ಎಂದು ಸದಸ್ಯರಿಗೆ ಸೂಚಿಸಲಾಗಿದೆ ಎಂದರು.
9189ರಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಮುದೇನಗುಡಿ ರಸ್ತೆಯಲ್ಲಿ ಪಲಾನುಭವಿಗಳಿಗೆ ನಿವೇಶನ ನೀಡಿ ಮನೆಗಳನ್ನೂ ನಿರ್ಮಿಸಲಾಗಿತ್ತು. ಆದರೆ ಫಲಾನುಭವಿಗಳ ಹೆಸರಿನಲ್ಲಿ ಉತಾರಗಳು ಇದ್ದಿರಲಿಲ್ಲ. ಈಗಾಗಲೇ ಸಭೆಯಲ್ಲಿ ಚರ್ಚಿಸಿ, ಫಲಾನುಭವಿಗಳಿಗೆ ಉತಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ಪಕ್ಷಾತೀತ, ಜಾತ್ಯಾತೀತವಾಗಿ ಅರ್ಹ ಫಲಾನುಭವಿಗಳಿಗೆ ಹೊಸ ನಿವೇಶನಗಳು ದೊರಕಬೇಕು ಎಂಬ ನನ್ನ ನಿಲುವಿಗೆ ಎಲ್ಲರೂ ಬದ್ಧರಾಗಿರಬೇಕು ಎಂದು ಸೂಚಿಸಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ಮುಖ್ಯಾಧಿಕಾರಿ ರಮೇಶ ಹೊಸಮನಿ ಸೇರಿದಂತೆ ರೋಣ, ನರೇಗಲ್ಲ, ಗಜೇಂದ್ರಗಡ ತಾಲೂಕುಗಳ ಆಶ್ರಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಫಲಾನುಭವಿಗಳ ಮನೆಗಳನ್ನು ಸ್ಲಂ ಬೋರ್ಡ್ನಿಂದ ನಿರ್ಮಿಸಿಕೊಡಲಾಗುವುದು. ಅಲ್ಲದೆ ಫಲಾನುಭವಿ 1 ಲಕ್ಷ ರೂ ಹಣ ಕಟ್ಟಿದರೆ ಸಾಕು, ಸರಕಾರ 4.5 ಲಕ್ಷ ರೂ ಭರಿಸುವ ಮೂಲಕ ಸುಸಜ್ಜಿತ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ನೀಡಲಾಗುವುದು. ಮುಖ್ಯವಾಗಿ 35 ವರ್ಷ ಹಿಂದೆ ನಿರ್ಮಿಸಿದ ಮನೆಗಳನ್ನು ಕೆಡವಿ ಅವರಿಗೂ ಸಹ ಹೊಸ ಮನೆಗಳನ್ನು ನಿರ್ಮಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
– ಜಿ.ಎಸ್. ಪಾಟೀಲ
ಶಾಸಕರು, ರೋಣ.