ನವದೆಹಲಿ: ಸಾಮಾಜಿಕ ಮಾಧ್ಯಮ ವೇದಿಕೆಗಳು ಕಂಟೆಂಟ್ ಕ್ರಿಯೇಟರ್ಸ್ಗಳಿಗೆ ನ್ಯಾಯಯುತ ಆದಾಯದ ಪಾಲನ್ನು ಹಂಚಿಕೊಳ್ಳಬೇಕು ಎಂದು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ ಸಮಾವೇಶದಲ್ಲಿ ಮಾತನಾಡಿದ ಅವರು,
ಸುದ್ದಿ ಸಂಸ್ಥೆಗಳು, ಸಾಂಪ್ರದಾಯಿಕ ಮಾಧ್ಯಮಗಳು, ದೂರದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಕಂಟೆಂಟ್ ಕ್ರಿಯೇಟರ್ಸ್, ಪ್ರಭಾವಿಗಳು, ಪ್ರಾಧ್ಯಾಪಕರು ಮತ್ತು ಸಂಶೋಧಕರು ಸೇರಿದಂತೆ ಎಲ್ಲರಿಗೂ ಸಾಮಾಜಿಕ ಮಾಧ್ಯಮ ವೇದಿಕೆಗಳು ನ್ಯಾಯಸಮ್ಮತವಾಗಿ ಆದಾಯ ಹಂಚಿಕೆ ಮಾಡಬೇಕು ಎಂದು ತಿಳಿಸಿದರು.
ವೇದಿಕೆಗಳಲ್ಲಿ ಸಮಾನ ಹಣಗಳಿಕೆ ಮಾದರಿಗಳನ್ನು ಜಾರಿಗೆ ತರಬೇಕೆಂದು ಅವರು ಕರೆ ನೀಡಿದರು. ಮಾಧ್ಯಮ, ಶಾಸಕಾಂಗ ಮತ್ತು ನ್ಯಾಯಾಂಗ ಸೇರಿದಂತೆ ಮಾನವ ಸಮಾಜದ ವಿವಿಧ ಸ್ತಂಭಗಳನ್ನು ಬಂಧಿಸಿರುವ ನಂಬಿಕೆ ಎಂಬ ತತ್ವ ಇತ್ತೀಚೆಗೆ ಸವಾಲಿಗೆ ಒಳಗಾಗಿದೆ ಎಂದು ಹೇಳಿದರು.
ಇಡೀ ಸಮಾಜವು ಸಂಸ್ಥೆಗಳ ಮೇಲಿನ ನಂಬಿಕೆಯ ಮೇಲೆ ನಿರ್ಮಾಣಗೊಂಡಿದೆ. ಆ ನಂಬಿಕೆಗೆ ಧಕ್ಕೆಯಾದಾಗ ಸಮಾಜದ ಅಡಿಪಾಯವೇ ದುರ್ಬಲಗೊಳ್ಳಲು ಆರಂಭವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಡೀಪ್ಫೇಕ್ಗಳು, ತಪ್ಪು ಮಾಹಿತಿ ಅಭಿಯಾನಗಳು ಹಾಗೂ ಕೃತಕವಾಗಿ ಸೃಷ್ಟಿಸಲಾದ ವೀಡಿಯೊಗಳು ಮಾಧ್ಯಮ ಸೇರಿದಂತೆ ಹಲವು ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ದುರ್ಬಲಗೊಳಿಸುತ್ತಿವೆ ಎಂದು ಸಚಿವರು ಎಚ್ಚರಿಸಿದರು.



