ವಿಜಯಸಾಕ್ಷಿ ಸುದ್ದಿ, ಗದಗ: ಮುಂದಿನ ಒಂದು ತಿಂಗಳೊಳಗಾಗಿ ರಾಜ್ಯದಲ್ಲಿ ಶಾಲಾ ಮಕ್ಕಳ ಫೇಸ್ ರೀಡಿಂಗ್ ಹಾಜರಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಗದಗ ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ಫೇಸ್ ರೀಡಿಂಗ್ ಆನ್‌ಲೈನ್ ಹಾಜರಾತಿ `ಪ್ರತ್ಯಕ್ಷ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರಿ ಶಾಲಾ ಶಿಕ್ಷಕರ ಆನ್‌ಲೈನ್ ಹಾಜರಾತಿ ಅಗತ್ಯವಿದ್ದು, ಇದೇ ಪ್ರಕ್ರಿಯೆಯನ್ನು ರಾಜ್ಯಾದ್ಯಂತ ಕೈಗೊಳ್ಳಲು ಹಿರಿಯ ಸಚಿವ ಎಚ್.ಕೆ. ಪಾಟೀಲರ ಸಹಕಾರ ಅತ್ಯಗತ್ಯವಿದೆ. ಶಿಕ್ಷಕರ ಫೇಸ್ ರೀಡಿಂಗ್ ಹಾಜರಾತಿ ಪ್ರಕ್ರಿಯೆಯಂತೆ ರಾಜ್ಯದಲ್ಲಿರುವ 57 ಲಕ್ಷ ಶಾಲಾ ಮಕ್ಕಳ ಫೇಸ್ ರೀಡಿಂಗ್ ಹಾಜರಾತಿಗೆ ಇನ್ನೊಂದು ತಿಂಗಳ ಒಳಗಾಗಿ ಅಧಿಕೃತ ಚಾಲನೆ ನೀಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಸಚಿವರು ಹೇಳಿದರು.
ಕಾನೂನು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಆಯ್ಯ-ವ್ಯಯ ಬಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯಂತೆ ರಾಜ್ಯದಲ್ಲಿ ಶಿಕ್ಷಕರು, ಇಲಾಖೆಯ ಸಿಬ್ಬಂದಿಳಿಗೆ ಆನ್‌ಲೈನ್ ಹಾಜರಾತಿಗೆ ಇಂದು ಗದಗನಲ್ಲಿ ಚಾಲನೆ ನೀಡಲಾಗಿದೆ. ಖೊಟ್ಟಿ ಹಾಜರಾತಿಗೆ ಇನ್ನುಮುಂದೆ ಅವಕಾಶ ಇಲ್ಲ ಎಂದು ನುಡಿದರು.
ಜಿಲ್ಲೆಯ ಒಟ್ಟು ಶಿಕ್ಷಕರು, ಸಿಬ್ಬಂದಿಗಳು ಸೇರಿ 4789 ಜನರು ಆನ್‌ಲೈನ್ ಹಾಜರಾತಿ ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯ 715 ಶಾಲೆಗಳು, 14 ಕಚೇರಿಗಳು, 253 ಸಿಬ್ಬಂದಿಗಳು ಮತ್ತು ಶಿಕ್ಷಕರಿಂದ ನೋಂದಣಿ ಪ್ರಕ್ರಿಯೆ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಈ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಸಚಿವರು ತಿಳಿದರು.
ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಶಾಸಕ ಡಾ. ಚಂದ್ರು ಲಮಾಣಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ.ಬಿ. ಅಸೂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ್ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿ.ಪಂ ಸಿಇಒ ಭರತ ಎಸ್, ಶಿಕ್ಷಣ ಇಲಾಖೆ ಅಪರ ಆಯುಕ್ತೆ ಶ್ರೀಮತಿ ಸಿಂತ್ರಿ, ಡಿಡಿಪಿಐ ಆರ್.ಎಸ್. ಬುರಡಿ ಸೇರಿದಂತೆ ಇತರ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.
ಶಿಕ್ಷಕರು ಶಾಲಾ ಆವರಣದ ತಲುಪಿದ ನಂತರ ಮೊಬೈಲ್ ಆ್ಯಪ್ ಮೂಲಕ ಹಾಕಬೇಕಾಗುತ್ತದೆ. ಮನೆಯಲ್ಲಿ ಕುಳಿತು ಹಾಜರಿ ಹಾಕುವ ಅವಕಾಶ ಇಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ಶಾಲೆಯಲ್ಲಿ ಶಿಕ್ಷಕರು ಇರುವಂತೆ ಪ್ರಕ್ರಿಯೆ ಆಗುತ್ತಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶಿಕ್ಷಕರಿಗೆ ಕಾಲಾವಕಾಶ ಸಿಕ್ಕಂತಾಗುತ್ತಿದೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.