ಬೆಂಗಳೂರು: ಹಿಂದೊಮ್ಮೆ 415 ಸಂಸದರ ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಪಕ್ಷವು ಇವತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಕೇವಲ 99 ಸ್ಥಾನಗಳಿಗೆ ತೃಪ್ತಿ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.
ವಿಧಾನಸಭೆಯಲ್ಲಿ ಇಂದು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಇಂಥ ಹೀನಾಯ ಪರಿಸ್ಥಿತಿ ಬಂದಿದೆ ಎಂದು ಒಂದು ಕ್ಷಣ ಯೋಚಿಸಬೇಕಾಗುತ್ತದೆ. ಹಿಂದೆ ಸೀತೆಯನ್ನು ರಾವಣ ಅಪಹರಿಸಿ ಲಂಕೆಗೆ ತೆಗೆದುಕೊಂಡು ಹೋದನೋ, ಅದೇ ರೀತಿ ಕಾಂಗ್ರೆಸ್ಸಿನವರು ಮಹಾತ್ಮ ಗಾಂಧಿಯವರ ಹೆಸರನ್ನು ಬಳಸಿಕೊಂಡಿದೆ. ಈ ನಕಲಿ ಕಾಂಗ್ರೆಸ್ ಪಕ್ಷವು, ಮಹಾತ್ಮ ಗಾಂಧಿಗೂ ಟೋಪಿ ಹಾಕುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಅಷ್ಟೇ ಅಲ್ಲ; ಬಡತನ ನಿರ್ಮೂಲನೆ ಮಾಡುತ್ತೇವೆ; ಗರೀಬಿ ಹಠಾವೋ ಎಂದು ಹೇಳಿ, ಈ ದೇಶದ ಬಡವರಿಗೂ ಮಕ್ಮಲ್ ಟೋಪಿ ಹಾಕುವ ಕೆಲಸವನ್ನು ಕಾಂಗ್ರೆಸ್ಸಿನವರು ಮಾಡಿದ ಪರಿಣಾಮವಾಗಿ ಇಂಥ ಹೀನಾಯ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ದೇಶ ಮತ್ತು ರಾಜ್ಯದಲ್ಲಿ ಬಂದಿದೆ ಎಂದು ನುಡಿದರು.
ಕಾಂಗ್ರೆಸ್ ಪಕ್ಷವು ದೇಶದಲ್ಲಿ ಇಂಥ ಹೀನಾಯ ಪರಿಸ್ಥಿತಿಗೆ ಇವತ್ತು ಯಾಕೆ ಬಂದಿದೆ ಎಂದು ಬೆಳಕು ಚೆಲ್ಲಬೇಕಾಗಿತ್ತು. ಈ ದೇಶದಲ್ಲಿ 1961ರಲ್ಲಿ ಕಾಂಗ್ರೆಸ್ಸಿನ 364 ಸಂಸದರಿದ್ದು, 1984ರಲ್ಲಿ 415 ಸಂಸದರು ಸಂಸತ್ತಿನಲ್ಲಿದ್ದರು ಎಂದು ಗಮನಕ್ಕೆ ತಂದರು.
ನಮ್ಮ ರಾಜ್ಯದಿಂದ ಜಿಎಸ್ಟಿ ತೆರಿಗೆ ಮೂಲಕ ಕೇಂದ್ರಕ್ಕೆ ಎಷ್ಟು ಮೊತ್ತ ಹೋಗಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿವೆ ಎಂದ ಅವರು, ಆಡಳಿತ ಪಕ್ಷದವರ ಮಾತನ್ನು ಕೇಳುತ್ತಿದ್ದರೆ ನಮ್ಮ ರಾಜ್ಯದ ತೆರಿಗೆ ಹಣದಿಂದ ಕೇಂದ್ರ ಸರಕಾರವು ಬಹಳ ಭ್ರಷ್ಟಾಚಾರ ಮಾಡಿದೆ; ಲೂಟಿ ಮಾಡಿದೆ; ಈ ದೇಶದಲ್ಲಿ, ರಾಜ್ಯದಲ್ಲಿ ಅಭಿವೃದ್ಧಿಯೇ ಆಗಿಲ್ಲ ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ಇದು ಒಂದು ರೀತಿ ಅರ್ಥಹೀನ ಎಂದು ತಿಳಿಸಿದರು.



