ಹುಬ್ಬಳ್ಳಿ:- ಹುಬ್ಬಳ್ಳಿಯಲ್ಲಿ ನಕಲಿ ಆಹಾರ ಇಲಾಖೆ ಅಧಿಕಾರಿಗಳು ತಲೆ ಎತ್ತಿದ್ದು, ಹಣ ಮಾಡೋ ಉದ್ದೇಶಕ್ಕೆ ಕೆಲವರು ಅಧಿಕಾರಿಗಳ ಸೋಗಿನಲ್ಲಿ ರೋಲ್ ಕಾಲ್ಗೆ ಇಳಿದಿದ್ದಾರೆ. ಆಹಾರ ಇಲಾಖೆ ಹೆಸರಿನಲ್ಲಿ ದುರ್ಗದ ಬೈಲ್ನಲ್ಲಿನ ಕಿರಾಣಿ ಅಂಗಡಿಗಳ ಮೇಲೆ ಏಕಾಏಕಿ ದಾಳಿ ಮಾಡಿದ್ದ ನಕಲಿ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ ಹಾಗೂ ಲಕ್ಷ್ಮಣ ನಕಲಿ ಅಧಿಕಾರಿಗಳು ಎಂದು ಗುರುತಿಸಲಾಗಿದೆ. ಏಕಾಏಕಿ ದಾಳಿ ನಡೆಸಿದ ಆರೋಪಿಗಳು, ಕಿರಾಣಿ ಅಂಗಡಿ ಒಳಗೆ ಪರಿಶೀಲಿಸಿದರು. ಬಳಿಕ ಮಾಲೀಕರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೇಳುತ್ತಲೇ ಕಿರಾಣಿ ಅಂಗಡಿ ಮಾಲೀಕರು ನಕಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ಇವರಿಬ್ಬರು ನಕಲಿ ಅಧಿಕಾರಿಗಳು ಎಂದು ಅಂಗಡಿ ಮಾಲೀಕರಿಗೆ ತಿಳಿಯುತ್ತಿದ್ದಂತೆ ಲಕ್ಷ್ಮಣ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಇನ್ನೋರ್ವ ನಕಲಿ ಅಧಿಕಾರಿ ಮಂಜುನಾಥನನ್ನು ಕಿರಾಣಿ ಅಂಗಡಿ ಮಾಲೀಕರು ಹುಬ್ಬಳ್ಳಿಯ ಘಂಟಿಕೇರಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ನಕಲಿ ಅಧಿಕಾರಿಗಳ ಗ್ಯಾಂಗ್ಗೆ ಕಿರಾಣಿ ಅಂಗಡಿ ಮಾಲೀಕರು ರೋಸಿ ಹೋಗಿದ್ದರು. ಕಳೆದ ಕೆಲ ದಿನಗಳಿಂದ ಒಂದಲ್ಲಾ ಒಂದು ಅಂಗಡಿ ಇವರ ಟಾರ್ಗೆಟ್ ಆಗಿತ್ತು. ಅಂಗಡಿಗೆ ಹೋಗಿ, ಆಹಾರ ಇಲಾಖೆ ಅಧಿಕಾರಿಗಳು ಅಂತ ಸುಳ್ಳು ಹೇಳಿ, ಬಿಲ್ ಕೇಳುವುದು, ಲೇಬಲ್ ಬಗ್ಗೆ ವಿಚಾರಣೆ ಮಾಡುವುದು, ಅದು ಸರಿ ಇಲ್ಲ, ಇದು ಸರಿ ಇಲ್ಲ ಅಂತ ಹೇಳಿ, ಹಣ ಕೇಳುತ್ತಿದ್ದರು. ಆರೋಪಿಗಳು ಕೇವಲ ಕಿರಾಣಿ ಅಂಗಡಿಗಳ ಮೇಲೆ ದಾಳಿ ಮಾಡಿ, ಮಾಲೀಕರಿಂದ ಹಣ ವಸೂಲಿ ಮಾಡತಿದ್ದರಂತೆ. ನಕಲಿ ಅಧಿಕಾರಿಗಳ ಬಂಡವಾಳ ಬಯಲಾಗುತ್ತಲೇ ಕಿರಾಣಿ ಅಂಗಡಿ ಮಾಲೀಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಘಟನೆ ಸಂಬಂಧ ಕಿರಾಣಿ ಅಂಗಡಿ ಮಾಲೀಕರು ಘಂಟಿಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.