ಬೆಂಗಳೂರು: ನಕಲಿ ನಂಬರ್ ಪ್ಲೇಟ್ ಬಳಸಿ ವಂಚಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕಬ್ಬನ್ ಪಾರ್ಕ್ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರು. ಆದರೆ ನೋಟಿಸ್ ನೀಡುತ್ತಿದ್ದಂತೆಯೇ ರಿಕ್ಕಿ ರೈ ವಿದೇಶಕ್ಕೆ (ರಷ್ಯಾ) ತೆರಳಿರುವುದಾಗಿ ತಿಳಿದುಬಂದಿದೆ.
ಆರೋಪಿ ದೇಶ ಬಿಟ್ಟು ತೆರಳಿರುವ ಹಿನ್ನೆಲೆಯಲ್ಲಿ, ಪೊಲೀಸರು ಲುಕ್ಔಟ್ ನೋಟಿಸ್ ಜಾರಿಗೊಳಿಸಲು ಸಿದ್ಧತೆ ನಡೆಸುತ್ತಿದ್ದಾರೆ.ಇದಲ್ಲದೆ, ರಿಕ್ಕಿ ರೈ ಬಳಸುತ್ತಿದ್ದ ಐಷಾರಾಮಿ ಲ್ಯಾಂಬೋರ್ಗಿನಿ ಕಾರನ್ನು ಪೊಲೀಸರು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಕಾರಿಗೆ ಆರ್ಟಿಒನಲ್ಲಿ ನೋಂದಣಿಯಾಗದ KA 05 NR 0009 ಎಂಬ ಫ್ಯಾನ್ಸಿ ನಂಬರ್ ಪ್ಲೇಟ್ ಅಳವಡಿಸಿ ವಂಚನೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ನೋಂದಣಿ ಮಾಡಿಸದ ಹಿನ್ನೆಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಆರ್ಟಿಒ ಅಧಿಕಾರಿಗಳು ₹35 ಲಕ್ಷ ದಂಡ ವಿಧಿಸಿದ್ದರು.
ಇಷ್ಟಾದರೂ, ಕಬ್ಬನ್ ಪಾರ್ಕ್ ಪ್ರದೇಶದಲ್ಲಿ ಮತ್ತೆ ಡ್ರಿಫ್ಟಿಂಗ್ ನಡೆಸಿದ ಆರೋಪವೂ ಇವರ ಮೇಲಿದೆ. ಪ್ರಕರಣ ಗಂಭೀರವಾಗುತ್ತಿದ್ದಂತೆ ಸೆಂಟ್ರಲ್ ಆರ್ಟಿಒನಲ್ಲಿ ನಂಬರ್ ನೋಂದಣಿಗೆ ರಿಕ್ಕಿ ರೈ ಅರ್ಜಿ ಸಲ್ಲಿಸಿರುವುದು ತಿಳಿದುಬಂದಿದೆ.



