ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶನಿವಾರದಿಂದ ರಾಜ್ಯಾದ್ಯಂತ ಪಿಯುಸಿ 2ನೇ ವರ್ಷದ ಪರೀಕ್ಷೆಗಳು ಪ್ರಾರಂಭವಾಗಿವೆ.ಅದಕ್ಕಾಗಿ ಪಟ್ಟಣದ ಎಸ್‌ಎ ಪಿಯು ಕಾಲೇಜ್ ಮತ್ತು ಅಭಿನವ ಪಿಯು ಕಾಲೇಜ್‌ಗಳು ಅಲಂಕೃತಗೊಂಡು ವಿದ್ಯಾರ್ಥಿಗಳಿಗೆ ಸಂತಸವನ್ನು ನೀಡುವುದರ ಜೊತೆಗೆ ಅವರಲ್ಲಿ ಪರೀಕ್ಷೆ ಬರೆಯಲು ಆತ್ಮಸ್ಥೈರ್ಯವನ್ನು ತುಂಬಿದವು.
ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ಎರಡೂ ಕಾಲೇಜುಗಳ ಪ್ರಾಚಾರ್ಯರಾದ ವೈ.ಸಿ. ಪಾಟೀಲ ಮತ್ತು ಅನುಸೂಯಾ ಪಾಟೀಲರು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಅವರೊಂದಿಗೆ ಎರಡೂ ಕಾಲೇಜುಗಳ ಸಿಬ್ಬಂದಿಯವರು ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿ ಅವರಲ್ಲಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸುವ ಬಗೆಯನ್ನು ಸೊಗಸಾಗಿ ಹೇಳಿಕೊಡುತ್ತಿದ್ದರು.
ಇದಕ್ಕೆ ಪ್ರತಿಯಾಗಿ ಯುದ್ಧ ಗೆಲ್ಲಲು ಹೊರಟ ಸೇನಾನಿಗಳಂತೆ ಒಳ ಬರುತ್ತಿದ್ದ ವಿದ್ಯಾರ್ಥಿಗಳು ತಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಮರೆಯದೆ ಎದುರಾದ ಎಲ್ಲ ಶಿಕ್ಷಕರ ಕಾಲಿಗೆ ಬಿದ್ದು ಅವರ ಆಶೀರ್ವಾದವನ್ನು ಬೇಡುವ ದೃಶ್ಯ ಪಾಲಕರ ಕಣ್ಣಂಚಿನಲ್ಲಿ ಸಂತಸದ ನೀರನ್ನುಕ್ಕಿಸುತ್ತಿತ್ತು. ಕಾಲಿಗೆ ಬಿದ್ದ ಪ್ರತಿ ಶಿಷ್ಯರನ್ನೂ ಎತ್ತಿ ಮೈದಡವಿ ಆಶೀರ್ವದಿಸುತ್ತಿದ್ದ ಗುರುಗಳ ಕ್ರಿಯೆಗೆ ಎಲ್ಲರೂ ಶರಣೆಂದರು.