‘ಫ್ಯಾಮಿಲಿ ಮ್ಯಾನ್ ಸೀಸನ್ 3’ ವೆಬ್ ಸೀರಿಸ್ನಲ್ಲಿ ನಟಿಸಿದ್ದ ರೋಹಿತ್ ಬಸ್ಫೋರೆ ಅವರ ಶವ ಪತ್ತೆಯಾಗಿದೆ. ಅಸ್ಸಾಂನಲ್ಲಿರೋ ಗರ್ಭಾಗಂ ಫಾರೆಸ್ಟ್ನ ಜಲಪಾತದಲ್ಲಿ ರೋಹಿತ್ ಮೃತದೇಹ ಪತ್ತೆಯಾಗಿದ್ದು, ನಟನ ಸಾವು ಆಕಸ್ಮಿಕವೋ ಅಥವಾ ಕೊಲೆಯೋ ಎಂಬ ಅನುಮಾನ ಶುರುವಾಗಿದೆ. ಫ್ಯಾಮಿಲಿ ಮ್ಯಾನ್ 3 ಸೀಸನ್ನ ಶೂಟಿಂಗ್ ನಡೆಯುತ್ತಿರುವಾಗಲೇ ರೋಹಿತ್ ಹತ್ಯೆ ನಡೆದಿದೆ.
ಮುಂಬೈನಲ್ಲಿ ವಾಸವಿದ್ದ ರೋಹಿತ್ ಕೆಲ ತಿಂಗಳ ಹಿಂದೆ ತಮ್ಮ ಹುಟ್ಟೂರಾದ ಗುವಾಹಟಿಗೆ ಆಗಮಿಸಿದ್ದರು. ಏಪ್ರಿಲ್ 27ರಂದು ರೋಹಿತ್ ಅವರು ಗೆಳೆಯರ ಜೊತೆ ಹೊರಕ್ಕೆ ಹೋಗೋದಾಗಿ ಹೇಳಿ ಮನೆಯಿಂದ ಹೋಗಿದ್ದಾರೆ. ಆದರೆ, ಸಂಜೆ ಆದರೂ ಅವರು ಮನೆಗೆ ಬರಲಿಲ್ಲ ಮತ್ತು ಯಾರ ಸಂಪರ್ಕಕ್ಕೂ ಸಿಗಲಿಲ್ಲ. ಇದು ಸಾಕಷ್ಟು ಅನುಮಾನ ಮೂಡಿಸಿತು. ಆ ಬಳಿಕ ಗೆಳೆಯರು ಕರೆ ಮಾಡಿ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ರೋಹಿತ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇತ್ತೀಚೆಗೆ ಪಾರ್ಕಿಂಗ್ ವಿಚಾರಕ್ಕೆ ರಂಜಿತ್, ಅಶೋಕ್, ಧರಮ್ ಜೊತೆ ಕಿತ್ತಾಟ ನಡೆದಿತ್ತು. ಈ ವೇಳೆ ಅವರು ರೋಹಿತ್ಗೆ ಕೊಲೆ ಮಾಡೋ ಬೆದರಿಕೆ ಹಾಕಿದ್ದರು. ಅಲ್ಲದೆ, ರೋಹಿತ್ ಅವರ ಸಂಬಂಧಿ, ಅಮರ್ದೀಪ್ ಕೂಡ ಈ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿದೆ. ಈ ಟ್ರಿಪ್ನ ಪ್ಲ್ಯಾನ್ ಮಾಡಿದ್ದೇ ಅವರು ಎನ್ನಲಾಗಿದೆ.
ರೋಹಿತ್ ಮೃತದೇಹದ ಮೇಲೆ ಸಾಕಷ್ಟು ಗಾಯಗಳಿವೆ. ಹೀಗಾಗಿ, ಇದು ಆಕಸ್ಮಿಕ ಸಾವು ಎಂದು ಹೇಳಲು ಸಾಧ್ಯವಿಲ್ಲ. ಇದು ಕೊಲೆ ಇದ್ದರೂ ಇರಬಹುದು ಎಂದು ಹೇಳಲಾಗುತ್ತಿದೆ. ‘ಈಗಾಗಲೇ ನಟ ಮರಣೋತ್ತರ ಪರೀಕ್ಷೆ ನಡೆದಿದೆ. ಪ್ರಕರಣದ ತನಿಖೆ ನಡೆಸುತ್ತೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.