ಕೊಡಗು: ಕೇರಳದ ವಯನಾಡು ಜಿಲ್ಲೆಯ ಮಾನಂದವಾಡಿ ವ್ಯಾಪ್ತಿಯಲ್ಲಿ ಕರ್ನಾಟಕ ಮೂಲದ ಉದ್ಯಮಿಯೊಬ್ಬರು ಕುಟುಂಬ ಸಮೇತ ಆತ್ಮಹತ್ಯೆಗೆ ಯತ್ನಿಸಿರುವ ದುರ್ಘಟನೆ ನಡೆದಿದೆ. ಈ ಘಟನೆಯಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ನಿವಾಸಿ, ಉದ್ಯಮಿ ಸಜೀರ್ ಮೃತಪಟ್ಟಿದ್ದಾರೆ.
ಸಜೀರ್ ಅವರ ಪತ್ನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕಲ್ಲಿಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳನ್ನು ಸ್ಥಳೀಯ ನಿವಾಸಿಗಳು ಸಮಯಕ್ಕೆ ಸರಿಯಾಗಿ ರಕ್ಷಿಸಿದ್ದಾರೆ. ಈ ಸಂಬಂಧ ಮಾನಂದವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊ.ಲೀಸರು ತನಿಖೆ ಕೈಗೊಂಡಿದ್ದಾರೆ.
ಮೃತ ಉದ್ಯಮಿ ಸಜೀರ್ ಕೊಡಗು ಜಿಲ್ಲೆಯ ಕುಟ್ಟ ಗ್ರಾಮದಲ್ಲಿ ಹಲವು ವ್ಯಾಪಾರ ಮಳಿಗೆಗಳನ್ನು ಹೊಂದಿದ್ದರು ಎನ್ನಲಾಗಿದೆ. ತನಿಖೆಯ ಪ್ರಾಥಮಿಕ ಮಾಹಿತಿ ಪ್ರಕಾರ, ಬಾಪು ಎಂಬ ವ್ಯಕ್ತಿ ಸಜೀರ್‌ಗೆ ಸುಮಾರು 20 ಲಕ್ಷ ರೂ. ಹಣ ನೀಡಬೇಕಾಗಿತ್ತು. ಸಾಲ ಪಡೆದಿದ್ದ ಬಾಪುನ ಮನೆಯ ಎದುರಲ್ಲೇ ಸಜೀರ್ ಈ ಕೃತ್ಯಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.
ಇದೇ ವೇಳೆ ಆತ್ಮಹತ್ಯೆಗೂ ಮುನ್ನ ಸಜೀರ್ ಕಾರಿನಲ್ಲೇ ಕುಳಿತು ವಿಡಿಯೋ ರೆಕಾರ್ಡ್ ಮಾಡಿದ್ದು, ತಮ್ಮ ಆತ್ಮಹತ್ಯೆಗೆ ಬಾಪು ಕಾರಣ ಎಂದು ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ವಿಡಿಯೋವನ್ನು ತನಿಖೆಯ ಭಾಗವಾಗಿ ಪರಿಶೀಲಿಸಲಾಗುತ್ತಿದೆ. ಘಟನೆಯ ಹಿನ್ನಲೆ ಹಾಗೂ ಆತ್ಮಹತ್ಯೆಗೆ ಕಾರಣಗಳ ಕುರಿತು ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.



