ವಿಜಯಸಾಕ್ಷಿ ಸುದ್ದಿ, ಗದಗ: ಸಾಮಾಜಿಕ, ಧಾರ್ಮಿಕ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಸೂರ್ಯ-ಚಂದ್ರರಂತೆ ಮಿಂಚಿ ಎಲ್ಲರ ಮನ ತಣಿಸಿದ ಅಪರೂಪದಲ್ಲಿಯೇ ಅಪರೂಪವೆನಿಸಿದವರು ಸಮಾಜ ಸೇವಾಕರ್ತ ಚಂದ್ರು ಬಾಳಿಹಳ್ಳಿಮಠರು ಎಂದು ವಾಯವ್ಯ ಸಾರಿಗೆ ನಿಗಮದ ನಿವೃತ್ತ ವಿಭಾಗೀಯ ನಿಯಂತ್ರಣಾಧಿಕಾರಿ ಎಫ್.ಸಿ. ಹಿರೇಮಠ ಅಭಿಪ್ರಾಯಪಟ್ಟರು.
ಅವರು ಶನಿವಾರ ಚಂದ್ರು ಬಾಳಿಹಳ್ಳಿಮಠರು `ಜೀವಮಾನ ಸಾಧನೆ ಪ್ರಶಸ್ತಿ’ ಪಡೆದ ನಿಮಿತ್ತ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಅತಿ ದೊಡ್ಡ ಸಂಪತ್ತು ಎಂದರೆ ಬುದ್ಧಿವಂತಿಕೆ. ಅಮೂಲ್ಯ ಆಭರಣವೆಂದರೆ ತಾಳ್ಮೆ, ಅತ್ಯಂತ ಉತ್ತಮವಾದುದೆಂದರೆ ಮುಂದಾಲೋಚನೆ. ಉತ್ತಮ ಔಷಧಿ ಎಂದರೆ ನಗು. ಇವೆಲ್ಲವನ್ನೂ ಮೇಳೈಸಿದ ವ್ಯಕ್ತಿತ್ವವೇ ಚಂದ್ರು ಬಾಳಿಹಳ್ಳಿಮಠ ಅವರದು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಹೋಗುವ ಗುಣವೇ ಜೀವಮಾನ ಸಾಧನೆ ಪ್ರಶಸ್ತಿ ಬರಲು ಮುಖ್ಯ ಕಾರಣ. ಅವರ ಪ್ರತಿ ಸಾಧನೆಗೂ ಬಾಳಿಹಳ್ಳಿಮಠ ಪರಿವಾರದ ಕೊಡುಗೆ ದೊಡ್ಡದು ಎಂದರು.
ಸನ್ಮಾರ್ಗ ಪ.ಪೂ ಮಹಾವಿದ್ಯಾಲಯದ ಆಡಳಿತಾಧಿಕಾರಿ ಎಮ್.ಸಿ. ಹಿರೇಮಠ ಮಾತನಾಡಿ, ಪ್ರತಿ ಕುಟುಂಬಕ್ಕೂ ಕನಿಷ್ಠ ಮೂವರು ಮಕ್ಕಳಿರಬೇಕಂತೆ. ಸೈನ್ಯಕ್ಕಾಗಿ ಒಬ್ಬರು, ಸಮಾಜ ಸೇವೆಗಾಗಿ ಒಬ್ಬರು ಹಾಗೂ ಮತ್ತೋರ್ವರು ಮನೆತನ ಮುಂದುವರೆಸಿಕೊಂಡು ಹೋಗುವುದಕ್ಕಾಗಿ ಎಂದು ನಮ್ಮ ಹಿರಿಯರು ಹೇಳಿದಂತೆ ಚಂದ್ರು ಬಾಳಿಹಳ್ಳಿಮಠರು ಚಿಕ್ಕಂದಿನಲ್ಲಿಯೇ ಸ್ವಾವಲಂಬಿಯಾಗಿ, ಸಮಾಜಮುಖಿಯಾಗಿ ಅತ್ಯುತ್ತಮ ವ್ಯಾಪಾರಿಗಳಾಗಿ ಜನರೊಡನೆಯೇ ಬೆಳೆದವರು. ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿ, ಸಂಘಟಿಸುವುದು ಇವರ ಜಾಣ್ಮೆಯ ಪ್ರತೀಕ ಎಂದು ಅಭಿಪ್ರಾಯಪಟ್ಟರು.
ಬಾಳಿಹಳ್ಳಿಮಠ ಮನೆತನದ ವೀಣಾ ಪ್ರಸನ್ನ ಪ್ರಾಸಂಗಿಕವಾಗಿ ಮಾತನಾಡುತ್ತಾ, ನಮ್ಮ ಕುಟುಂಬವೇ ಹೆಮ್ಮೆ ಪಡುವಂತಹ ಸಾಧನೆಯನ್ನು ಚಂದ್ರು ಬಾಳಿಹಳ್ಳಿಮಠರು ಸಾಧಿಸಿರುವುದು ನಮಗೆಲ್ಲರಿಗೂ ಸಂತಸದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಂತಾ ಹಿರೇಮಠ, ಫಕಿರೇಶ ಹಿರೇಮಠ, ವಿಜಯಲಕ್ಷ್ಮೀ ಹಿರೇಮಠ, ಲಲಿತಾ, ಜಯಶ್ರೀ, ವಿಜಣ್ಣ ಬಾಳಿಹಳ್ಳಿಮಠ, ಶಿವಪ್ರಕಾಶ ಬಾಳಿಹಳ್ಳಿಮಠ ಹಾಗೂ ಕುಟುಂಬದ ಸದಸ್ಯರಿದ್ದರು.
ಸನ್ಮಾನ ಸ್ವೀಕರಿಸಿ ಚಂದ್ರು ಬಾಳಿಹಳ್ಳಿಮಠ ಮಾತನಾಡುತ್ತಾ, ತಮಗೆ ಸಂದ ಈ ಜೀವಮಾನ ಸಾಧನಾ ಪ್ರಶಸ್ತಿಗೆ ತಮ್ಮ ಪರಿವಾರದ ಸಹಾಯ-ಸಹಕಾರವೇ ಕಾರಣವಾಗಿದೆ ಎಂದರು.