ಪುಷ್ಪ 2’ ಸಿನಿಮಾದ ಪ್ರೀಮಿಯರ್ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿಂತೆ ನಟ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್ ನ ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇದೇ ತಿಂಗಳ ಡಿಸೆಂಬರ್ 4 ರಂದು ನಡೆದ ʻಪುಷ್ಪ 2: ದಿ ರೂಲ್ʼನ ಪ್ರೀಮಿಯರ್ ಶೋ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಸಂಭವಿಸಿ ರೇವತಿ (39) ಎಂಬ ಮಹಿಳೆ ಸಾವನ್ನಪ್ಪಿದ್ದರು. ಅವರ 9 ವರ್ಷದ ಮಗ ಕಾಲ್ತುಳಿತಕ್ಕೆ ಸಿಕ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಹಾಗೂ ಇನ್ನೂ ಇತರರ ವಿರುದ್ಧ ದೂರು ದಾಖಲಾಗಿತ್ತು. ಇದೀಗ ನಟ ಅಲ್ಲು ಅರ್ಜುನ್ ಹಾಗೂ ಅವರ ಬಾಡಿಗಾರ್ಡ್ ಇನ್ನಿತರರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಈ ಪ್ರಕರಣ ವಜಾಗೊಳಿಸುವಂತೆ ನಟ ಈಗಾಗಲೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈನಡುವೆ ಚಿಕ್ಕಡಪಲ್ಲಿ ಪೊಲೀಸರು ಏಕಾಏಕಿ ಬಂಧಿಸಿದ್ದಾರೆ. ಇದು ಪುಷ್ಪಾ-2 ಸಕ್ಸಸ್ ಸಂಭ್ರಮದಲ್ಲಿರುವ ಚಿತ್ರತಂಡಕ್ಕೆ ಹಾಗೂ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಅಲ್ಲು ಅರ್ಜುನ್ ಮನೆಗೆ ಹೋಗಿ, ಅವರ ಬೆಡ್ರೂಂ ಬಳಿಗೆ ಹೋಗಿ ಅಲ್ಲು ಅರ್ಜುನ್ ಅನ್ನು ಕರೆತರಲಾಗಿದೆ. ಅಲ್ಲು ಅರ್ಜುನ್ ಪೊಲೀಸ್ ಜೀಪು ಹತ್ತುವ ಮುಂಚೆ, ಈ ಬಗ್ಗೆ ಅಲ್ಲು ಅರ್ಜುನ್ ಪೊಲೀಸರು ತಮ್ಮನ್ನು ಬಂಧಿಸಿದ ವಿಧಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ನಂತರ ಅಲ್ಲು ಅರ್ಜುನ್ ಪೊಲೀಸ್ ಜೀಪು ಹತ್ತುವ ವೇಳೆ, ಅವರ ತಂದೆ ಅಲ್ಲು ಅರವಿಂದ್ ಸಹ ಪೊಲೀಸ್ ಜೀಪು ಹತ್ತಿದ್ದರು, ಆದರೆ ಪೊಲೀಸರು ಅವರನ್ನು ಕೆಳಗೆ ಇಳಿಸಿ, ಕೇವಲ ಅಲ್ಲು ಅರ್ಜುನ್ ಅನ್ನು ಮಾತ್ರವೇ ಬಂಧಿಸಿ ಕರೆದೊಯ್ದಿದ್ದಾರೆ ಎನ್ನಲಾಗುತ್ತಿದೆ.