ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜಮೌಳಿಗೆ ಸ್ನೇಹಿತನಿಂದಲೇ ಸಂಕಷ್ಟ ಎದುರಾಗಿದೆ. ರಾಜಮೌಳಿಯ ಹಳೆಯ ಸ್ನೇಹಿತರೊಬ್ಬರು, ರಾಜಮೌಳಿಯ ಹೆಸರು ಬರೆದಿಟ್ಟು, ತನ್ನ ಸಾವಿಗೆ ರಾಜಮೌಳಿಯೇ ಕಾರಣ ಎಂದು ಹೇಳಿ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಜಮೌಳಿ ನಿರ್ದೇಶನದ ಜೂ ಎನ್ಟಿಆರ್ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ‘ಯಮದೊಂಗ’ ಸಿನಿಮಾದ ಸಹ ನಿರ್ಮಾಪಕರೂ ಆಗಿದ್ದ ಶ್ರೀನಿವಾಸ್ ರಾವ್, ರಾಜಮೌಳಿಯ ಸಾಕಷ್ಟು ಹಳೆಯ ಸ್ನೇಹಿತರು. ಇದೇ ಸ್ನೇಹಿತ ಇದೀಗ ರಾಜಮೌಳಿ ವಿರುದ್ಧ ಆರೋಪಗಳನ್ನು ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜಮೌಳಿ, ತಮಗೆ ನೀಡಿದ ಹಿಂಸೆಯಿಂದಲೇ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ.
ಸಾಯುವ ಮುಂಚೆ ಮಾಡಿರುವ ವಿಡಿಯೋನಲ್ಲಿ ಮಾತನಾಡಿರುವ ಶ್ರೀನಿವಾಸ ರಾವ್, ‘ನನ್ನ ಸಾವಿಗೆ ರಾಜಮೌಳಿ ಮತ್ತು ರಮಾ ರಾಜಮೌಳಿ ಕಾರಣ. ನಾನು ಬಹಳ ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದೇನೆ. ನಾನು ಹಾಗೂ ರಾಜಮೌಳಿ 34 ವರ್ಷಗಳಿಂದಲೂ ಆತ್ಮೀಯ ಗೆಳೆಯರು. ನಮ್ಮ ಗೆಳೆತನದ ಬಗ್ಗೆಯೂ ಹಲವರಿಗೆ ಗೊತ್ತು. ನಾನು ಹಾಗೂ ರಾಜಮೌಳಿ ಒಬ್ಬಳೇ ಯುವತಿಯನ್ನು ಪ್ರೀತಿಸಿದ್ದೆವು. ಆದರೆ ಆಗ ರಾಜಮೌಳಿ, ನೀನು ತ್ಯಾಗ ಮಾಡು ಅಂದ, ನಾನು ಸಹ ಹಾಗೆಯೇ ಮಾಡಿದೆ. ಆ ನಂತರ ಈವರೆಗೆ ನಾನು ಯಾರನ್ನೂ ಮದುವೆ ಆಗಲಿಲ್ಲ’ ಎಂದಿದ್ದಾರೆ.
ಮುಂದುವರೆದು, ‘ಆದರೆ ಕೆಲ ತಿಂಗಳ ಮುಂಚೆ ನನಗೆ ಮತ್ತು ರಾಜಮೌಳಿಗೆ ಸಣ್ಣ ಮಾತಿನ ಚಕಮಕಿ ನಡೆಯಿತು, ಆಗ ನಾನು ‘ನಮ್ಮಿಬ್ಬರ ಟ್ರಯಾಂಗಲ್ ಲವ್ ಸ್ಟೋರಿ’ಯನ್ನು ಸಿನಿಮಾ ಮಾಡುತ್ತೀನಿ ಎಂದೆ. ಅದು ಅವನಿಗೆ ಭಯ ಹುಟ್ಟಿಸಿತು. ನಮ್ಮ ಕತೆಯನ್ನು ಎಲ್ಲರಿಗೂ ಹೇಳಿ ಬಿಡುತ್ತಾನೆ ಎಂದುಕೊಂಡು ನನಗೆ ಹಿಂಸೆ ಕೊಡಲು ಆರಂಭಿಸಿದೆ. ಭೈರವ, ಕಾರ್ತಿಕೇಯ (ಕೀರವಾಣಿ, ರಾಜಮೌಳಿ ಮಕ್ಕಳು) ಎಲ್ಲ ನನಗೆ ಆಪ್ತರಾಗಿದ್ದರು, ಆದರೆ ಅವರೂ ಸಹ ದೂರವಾದರು. ನಾನು ಒಂಟಿಯಾಗಿಬಿಟ್ಟೆ’ ಎಂದಿದ್ದಾರೆ ಶ್ರೀನಿವಾಸ್ ರಾವ್.
‘ಮೂವರು ವ್ಯಕ್ತಿಗಳ ನಡುವೆ ನಡೆದ ಘಟನೆಗೆ ಸಾಕ್ಷ್ಯಗಳು ಇರುವುದಿಲ್ಲ. ಆದರೆ ನಾನು ಈಗ ಸಾಯುತ್ತಿದ್ದೇನೆ. ಸುಮೋಟೊ (ಸ್ವಯಂ ಪ್ರೇರಿತ ದೂರು) ದಾಖಲಿಸಿಕೊಂಡು, ರಾಜಮೌಳಿಯನ್ನು ಲೈ ಡಿಟೆಕ್ಟರ್ ಬಳಸಿ ವಿಚಾರಣೆ ನಡೆಸಿದರೆ ನಿಜಾಂಶ ಹೊರಬರುತ್ತದೆ’ ಎಂದು ಶ್ರೀನಿವಾಸ್ ರಾವ್ ಹೇಳಿದ್ದಾರೆ.