ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ಸಂತ’, ಉಪೇಂದ್ರ ನಟನೆಯ ‘ನಾಗರಹಾವು’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಖ್ಯಾತ ನಿರ್ದೇಶಕ ಎಸ್ ಮುರಳಿ ಮೋಹನ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ತಮ್ಮ ಚಿಕಿತ್ಸೆಗೆ ಹಣಕಾಸಿನ ಅಗತ್ಯವಿದ್ದು ನೆರವಿಗಾಗಿ ಮನವಿ ಮಾಡಿದ್ದಾರೆ. ನಟ, ನಿರ್ದೇಶಕ ಉಪೇಂದ್ರ ಅವರ ಆಪ್ತರೂ ಆಗಿರುವ ಎಸ್ ಮುರಳಿ ಮೋಹನ್ ಸಿನಿಮಾ ನಿರ್ದೇಶನದ ಜೊತೆಗೆ ಹಲವಾರು ಸಿನಿಮಾಗಳಿಗೆ ಕತೆಗಾರ, ಸಂಭಾಷಣೆಕಾರ ಮತ್ತು ಗೀತ ರಚನೆಕಾರರಾಗಿಯೂ ಕೆಲಸ ಮಾಡಿದ್ದಾರೆ. ಈಗ ಅವರಿಗೆ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿದ್ದು, ಚಿಕಿತ್ಸೆಗಾಗಿ ದೊಡ್ಡ ಮೊತ್ತದ ಹಣಕಾಸಿನ ಅಗತ್ಯವಿದೆ. ಹೀಗಾಗಿ ಹಣಕಾಸಿನ ನೆರವು ನೀಡುವಂತೆ ಮುರುಳಿ ಮೋಹನ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಬಹಿರಂಗ ಪತ್ರ ಬರೆದಿರುವ ಎಸ್ ಮುರಳಿ ಮೋಹನ್, ‘ನಾನು ಕಳೆದ 36 ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ನಿರ್ದೇಶಕನಾಗಿ, ಸಂಭಾಷಣೆಕಾರನಾಗಿ, ಗೀತ ರಚನೆಕಾರನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ 2018 ರಿಂದಲೂ ಆರೋಗ್ಯ ಸಮಸ್ಯೆ ಇದೆ. ಮೂತ್ರಪಿಂಡ ವೈಫಲ್ಯ ಉಂಟಾಗಿದ್ದು ವಾರಕ್ಕೆ ಮೂರು ದಿನ ಡಯಾಲಿಸಿಸ್ ಮಾಡಿಸುತ್ತಿದ್ದೇನೆ. 2020ರಲ್ಲಿ ನಾನು ಮೂತ್ರಪಿಂಡಕ್ಕಾಗಿ ಅಂಗಾಗ ಕಸಿ ಕಾರ್ಯಕ್ರಮ ಜೀವನಸಾರ್ಥಕತೆಯಲ್ಲಿ ನೊಂದಣಿ ಮಾಡಿಸಿದ್ದೇನೆ. ಈಗ ನನಗೆ ಮೂತ್ರಪಿಂಡ ಕಸಿ ಮಾಡಿಸುವ ಸಮಯ ಬಂದಿದೆ. ಬೆಂಗಳೂರಿನ ಜೆಸಿ ನಗರದಲ್ಲಿರುವ ಟ್ರಸ್ಟ್ ವೆಲ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ವೈದ್ಯರು ಸೂಚಿಸಿದ್ದಾರೆ’ ಎಂದು ಮುರುಳಿ ಮೋಹನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಈ ಶಸ್ತ್ರಚಿಕಿತ್ಸೆಗೆ 25 ಲಕ್ಷ ರೂಪಾಯಿಗಳು ಅಗತ್ಯವಿದೆ. ನಾನು ಈಗಾಗಲೇ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಇತರೆ ಚಿಕಿತ್ಸೆಗಳು ಮಾಡಿಸಿಕೊಂಡಿರುವ ಕಾರಣ ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ. ತಾವುಗಳು ದಯಮಾಡಿ ನನಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಧನ ಸಹಾಯ ಮಾಡಬೇಕಾಗಿ ತಮ್ಮಲ್ಲಿ ವಿನಮ್ರವಾಗಿ ಪ್ರಾರ್ಥಿಸುತ್ತೇನೆ’ ಎಂದು ಪತ್ರದಲ್ಲಿ ಬರೆದು ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಎಸ್ ಮುರಳಿ ಮೋಹನ್ ನೀಡಿದ್ದಾರೆ.
ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ 25 ಲಕ್ಷ ರೂಪಾಯಿಗಳು ಅಗತ್ಯವಿದೆ. ನಾನು ಈಗಾಗಲೇ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಇತರೆ ಚಿಕಿತ್ಸೆಗಳು ಮಾಡಿಸಿಕೊಂಡಿರುವ ಕಾರಣ ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ. ತಾವುಗಳು ದಯಮಾಡಿ ನನಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಧನ ಸಹಾಯ ಮಾಡಬೇಕಾಗಿ ತಮ್ಮಲ್ಲಿ ವಿನಮ್ರವಾಗಿ ಪ್ರಾರ್ಥಿಸುತ್ತೇನೆ’ ಎಂದು ಪತ್ರದಲ್ಲಿ ಬರೆದುಕೊಂಡಿದ್ದು ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡಿದ್ದಾರೆ.