ಬೆಂಗಳೂರು: ‘ಗಾಂಧಾರಿ’ ಮೂಲಕ ಮನೆಮಾತಾಗಿರುವ ನಟಿ ಕಾವ್ಯಾ ಗೌಡ ಮತ್ತು ಅವರ ಪತಿ ಸೋಮಶೇಖರ್ ಮೇಲೆ ಅವರದೇ ಸಂಬಂಧಿಕರಿಂದ ಭೀಕರ ದಾಳಿ ನಡೆದಿರುವ ಆರೋಪ ದಾಖಲಾಗಿದೆ.
ನಟಿಯ ಹೆಚ್ಚುತ್ತಿರುವ ಜನಪ್ರಿಯತೆ ಸಹಿಸದೆ ಈ ದಾಳಿ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಆರೋಪಿಗಳೆಂದರೆ ಸೋಮಶೇಖರ್ ಅವರ ಅತ್ತಿಗೆಯ ತಂದೆ ಸೇರಿ ಕುಟುಂಬದವರೇ ಎಂಬುದು ಪ್ರಕರಣಕ್ಕೆ ಇನ್ನಷ್ಟು ಗಂಭೀರತೆ ತಂದಿದೆ.
ಮನೆಗೆ ನುಗ್ಗಿ ದಂಪತಿಯನ್ನು ನಿಂದಿಸಿ ಹಲ್ಲೆ ನಡೆಸಲಾಗಿದೆ. ಸೋಮಶೇಖರ್ ಮೇಲೆ ಚಾಕು ಬಳಸಿ ದಾಳಿ ನಡೆದಿದ್ದು, ಗಾಯಗೊಂಡಿದ್ದಾರೆ. ಕಾವ್ಯಾ ಗೌಡ ಮೇಲೂ ದೈಹಿಕ ದಾಳಿ ನಡೆದಿದೆ. ಜೊತೆಗೆ ಗಂಭೀರ ಬೆದರಿಕೆಗಳನ್ನು ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ಘಟನೆಯ ನಂತರ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ನಟಿ ಕಾವ್ಯಾ ಗೌಡ ಅವರ ಅಕ್ಕ ಭವ್ಯ ಗೌಡ ಅವರು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರೇಮ, ನಂದಿಶ್, ಪ್ರಿಯಾ ಮತ್ತು ರವಿಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಘಟನೆಯಿಂದ ನಟಿ ಕಾವ್ಯಾ ಗೌಡ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದಾರೆ ಎನ್ನಲಾಗಿದೆ.



