ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಎ.ಆರ್.ರೆಹಮಾನ್ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಪತ್ನಿ ಸೈರಾ ಭಾನು ಜೊತೆಗಿನ 29 ವರ್ಷಗಳ ದಾಂಪತ್ಯಕ್ಕೆ ರೆಹಮಾನ್ ಅಂತ್ಯ ಹಾಡಿದ್ದಾರೆ. ರೆಹಮಾನ್ ಹಾಗೂ ಸೈರಾ ಬಾನು ವಿಚ್ಚೇದನ ಘೋಷಿಸಿರುವ ಅಭಿಮಾನಿಗಳಿಗೆ ಶಾಕ್ ಆಗಿದೆ.
ವಿಚ್ಛೇದನದ ವಿಚಾರವನ್ನು ಸೈರಾ ಭಾನು ಅವರು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. 1995ರಲ್ಲಿ ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಅವರು ವಿವಾಹ ಆಗಿದ್ದರು. ಅವರದ್ದು ಅರೇಂಜ್ ಮ್ಯಾರೇಜ್. ಸಿನಿಮಾದಲ್ಲಿ ಬ್ಯುಸಿ ಆಗಿದ್ದ ರೆಹಮಾನ್ ಅವರಿಗೆ ಹುಡುಗಿ ನೋಡುವಷ್ಟು ಸಮಯ ಇರಲಿಲ್ಲ. ಹಾಗಾಗಿ ತಾಯಿ ನೋಡಿದ ಹುಡುಗಿಯನ್ನು ಅವರು ಮದುವೆ ಆಗಿದ್ದರು. ಆಗ ಅವರಿಗೆ 29 ವರ್ಷ ವಯಸ್ಸಾಗಿತ್ತು. ರೆಹಮಾನ್ ಮತ್ತು ಸೈರಾ ಬಾನು ಜೋಡಿಗೆ ಮೂವರು ಮಕ್ಕಳಿದ್ದಾರೆ.
ಬಹುತೇಕ ಮೂರು ದಶಕಗಳ ಕಾಲ ಹೊಂದಾಣಿಕೆಯಿಂದ ಸಂಸಾರ ಮಾಡಿದ ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಅವರು ಹೀಗೆ ಏಕಾಏಕಿ ವಿಚ್ಛೇದನ ಘೋಷಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ‘ಸಂಬಂಧದಲ್ಲಿನ ಭಾವನಾತ್ಮಕವಾಗಿ ಸಂಕಟದಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಇಬ್ಬರ ನಡುವೆ ದೊಡ್ಡ ಅಂತರ ಸೃಷ್ಟಿ ಆಗಿದೆ’ ಎಂದು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಸೈರಾ ಬಾನು ತಿಳಿಸಿದ್ದಾರೆ.
ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೇ ಗಾಯಕನಾಗಿಯೂ ಎ.ಆರ್. ರೆಹಮಾನ್ ಅವರಿಗೆ ಬೇಡಿಕೆ ಇದೆ. ತಮಿಳು, ತೆಲುಗು, ಹಿಂದಿ ಮುಂತಾದ ಭಾಷೆಯ ಸಿನಿಮಾಗಳಿಗೆ ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ಪಡೆದಿರುವ ಅವರು ವಿಶ್ವಾದ್ಯಂತ ಖ್ಯಾತಿ ಹೊಂದಿದ್ದಾರೆ. ಒಂದು ಸಾಂಗ್ ಹಾಡಲು ಅವರು ಬರೋಬ್ಬರಿ 3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಹಾಗಿದ್ದರೂ ಕೂಡ ಅವರು ಎಲ್ಲ ಹಾಡುಗಳನ್ನು ಒಪ್ಪಿಕೊಳ್ಳುವುದಿಲ್ಲ. ಗಾಯನಕ್ಕಿಂತಲೂ ಸಂಗೀತ ನಿರ್ದೇಶನದಲ್ಲಿ ಅವರು ಹೆಚ್ಚು ತೊಡಗಿಕೊಂಡಿದ್ದಾರೆ.