ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡಲು ಸಜ್ಜಾಗಿದ್ದಾರೆ. ಈಗಾಗಲೇ ಹಲವು ಭಾಷೆಗಳಲ್ಲಿ ಸಿನಿಮಾ ಮಾಡಿ ಸೈ ಎನಿಸಿಕೊಂಡಿರುವ ಗೌತಮ್ ವಾಸುದೇವ್ ಮೆನನ್ ಸದ್ಯದಲ್ಲೇ ಕನ್ನಡ ಸಿನಿಮಾ ನಿರ್ದೇಶನ ಮಾಡುತ್ತಿರುವುದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿಯೇ ವಿಭಿನ್ನ ರೀತಿಯ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿರುವ ಗೌತಮ್ ವಾಸುದೇವ್ ಮೆನನ್ ಇದೀಗ ಕನ್ನಡಕ್ಕೆ ಬರುತ್ತಿದ್ದಾರೆ. ಕಲ್ಟ್ ಕ್ಲಾಸಿಕ್ ಸಿನಿಮಾಗಳು ಎನಿಸಿಕೊಂಡಿರುವ ‘ರೆಹನಾ ಹೈ ತೇರೆ ದಿಲ್ ಮೇ’, ‘ಕಾಕ ಕಾಕ’, ‘ವೇಟ್ಟೆಯಾಡು ವಿಲೆಯಾಡು’, ‘ವನೈತಾಂಡಿ ವರುವಾಯ’, ‘ಯೇ ಮಾಯ ಚೇಸಾವೆ’, ‘ವಾರನಂ ಅಯರುಂ’, ‘ವೆಂದು ತನಿದತ್ತು ಕಾಡು’ ಅಂಥಹಾ ಸಿನಿಮಾಗಳನ್ನು ನೀಡಿರುವ ಗೌತಮ್ ವಾಸುದೇವ ಮೆನನ್ ಈಗ ಕನ್ನಡದಲ್ಲಿ ಸಿನಿಮಾ ನಿರ್ದೇಶಿಸಲು ರೆಡಿಯಾಗಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಗೌತಮ್, ಈ ವರ್ಷ ನಾನು ಕನ್ನಡ ಸಿನಿಮಾ ಮಾಡುವ ಆಲೋಚನೆ ಹೊಂದಿದ್ದೇನೆ. ದೊಡ್ಡ ಸಿನಿಮಾ ನಿರ್ಮಿಸುವ ಪ್ಲ್ಯಾನ್‌ಯಿದೆ. ದಕ್ಷಿಣದ ಜೊತೆಗೆ ಬಾಲಿವುಡ್‌ನಲ್ಲೂ ನಾನು ಹೆಚ್ಚಿನ ಸಿನಿಮಾಗಳನ್ನು ಮಾಡಿದ್ದೇನೆ. ನಾನು ಯಾವಾಗಲೂ ಭಾಷೆಯ ಗಡಿ ದಾಟಲು ಇಷ್ಟಪಡುತ್ತೇನೆ. ಈಗ ನಾನು ಕನ್ನಡದಲ್ಲಿ ಸಿನಿಮಾ ಮಾಡುವ ಗುರಿ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ.
ಕನ್ನಡ ನಾನು ಮಾತನಾಡುವ ಭಾಷೆಯಲ್ಲ. ಆದರೆ ನನಗೆ ಗೊತ್ತಿಲ್ಲದ ಭಾಷೆಯಲ್ಲಿ ಸಿನಿಮಾ ಮಾಡುವ ಸವಾಲನ್ನು ಸ್ವೀಕರಿಸಲು ರೆಡಿಯಾಗಿದ್ದೇನೆ ಎಂದು ಕನ್ನಡ ಸಿನಿಮಾ ಮಾಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಸ್ಯಾಂಡಲ್‌ವುಡ್‌ನ ಯಾವ ನಟರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ ಎಂಬ ಗುಟ್ಟನ್ನು ಮಾತ್ರ ಗೌತಮ್ ಬಿಟ್ಟುಕೊಟ್ಟಿಲ್ಲ.