ಹಲವು ವರ್ಷಗಳಿಂದ ವಿವಾದದಲ್ಲಿದ್ದ ಡಾ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಕಳೆದ ಎರಡು ದಿನಗಳ ಹಿಂದೆ ಕೆಡುವಲಾಗಿದೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋನಲ್ಲಿಯೇ ವಿಷ್ಣು ಸ್ಮಾರಕ ನಿರ್ಮಾಣ ಆಗಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಆದರೆ ಇದಕ್ಕೆ ಬಾಲಣ್ಣ ಅವರ ಕುಟುಂಬಸ್ಥರು ಅವಕಾಶ ನೀಡಿರಲಿಲ್ಲ. ಇದೀಗ ಕೋರ್ಟ್ ಆದೇಶದಂತೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸ್ಮಾರಕವನ್ನು ನೆಲಸಮಗೊಳಿಸಲಾಗಿದ್ದು, ಇದು ವಿಷ್ಣು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ವಿಷ್ಣುವರ್ಧನ್ ಅಸ್ತಿಯನ್ನು ನಮಗೆ ಕೊಡಿ ಎಂದು ಅಭಿಮಾನಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿರುವ ಅಭಿಮಾನಿಗಳು, ಅಭಿಮಾನ್ ಸ್ಟುಡಿಯೋನಲ್ಲಿದ್ದ ವಿಷ್ಣುವರ್ಧನ್ ಪುಣ್ಯಭೂಮಿಯನ್ನು ನೆಲಸಮಗೊಳಿಸಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಮೇರುನಟನೊಬ್ಬನ ಸಮಾಧಿಯನ್ನು ನೆಲಸಮಗೊಳಿಸಿದ್ದು ಕರ್ನಾಟಕ ಸಾಂಸ್ಕೃತಿಕ ಪರಂಪರೆಗೆ ಮುಜುಗರವೇ ಸರಿ. ಇಂಥಹಾ ಘಟನೆಗಳು ಇನ್ನಾದರೂ ನಿಲ್ಲಲಿ ಎಂದು ಆಶಿಸುತ್ತಾ, ಪುಣ್ಯಭೂಮಿಯಲ್ಲಿ ಇದ್ದ ವಿಷ್ಣುವರ್ಧನ್ ಅಸ್ತಿಯನ್ನು ಅಭಿಮಾನಿಗಳಿಗೆ ಹಸ್ತಾಂತರಿಸಬೇಕು ಎಂದು ಮನವಿ ಮಾಡಿದ್ದಾರೆ.
‘ಆ ಅಸ್ತಿಯ ಜೊತೆ ಅಭಿಮಾನಿಗಳಿಗೆ ಭಾವನಾತ್ಮಕ ಸಂಬಂಧ ಇರುವುದರಿಂದ ಹಾಗೂ ಆ ಅಸ್ತಿಗೆ ಪ್ರತಿವರ್ಷವೂ ಪೂಜೆ, ಸಂಸ್ಕಾರ ಮಾಡುವ ಉದ್ದೇಶ ಇರುವ ಕಾರಣ ಅದನ್ನು ಅಭಿಮಾನಿಗಳಿಗೆ ಹಸ್ತಾಂತರಿಸಬೇಕು ಎಂದು ಕೋರುತ್ತೇವೆ. ಒಂದೊಮ್ಮೆ ಆ ಅಸ್ತಿಯನ್ನು ಅವರು ನಾಶಪಡಿಸಿದ್ದರೆ ಕಾನೂನು ಹೋರಾಟ ಮಾಡುತ್ತೇವೆ’ ಎಂದು ಕೆಂಗೇರಿ ಪೊಲೀಸರಿಗೆ ಅಭಿಮಾನಿಗಳು ಬರೆದಿರುವ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.