ಭಾರತ–ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಗೆ ಮುನ್ನ, ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಬುಧವಾರ ಸಂಜೆ ವಡೋದರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಕೊಹ್ಲಿ ಬರುವ ಸುದ್ದಿ ತಿಳಿದ ಸಾವಿರಾರು ಅಭಿಮಾನಿಗಳು ವಿಮಾನ ನಿಲ್ದಾಣಕ್ಕೆ ಜಮಾಯಿಸಿದರು. ಹೊರಬಂದ ಕ್ಷಣದಲ್ಲೇ ‘ಕೊಹ್ಲಿ.. ಕೊಹ್ಲಿ..’ ಎಂಬ ಘೋಷಣೆಗಳ ನಡುವೆ ಅಭಿಮಾನಿಗಳು ಅವರನ್ನು ಸುತ್ತುವರೆದರು. ವಿಮಾನ ನಿಲ್ದಾಣದಿಂದ ಕಾರಿನತ್ತ ಸಾಗುವ ವೇಳೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದು, ಭದ್ರತಾ ಸಿಬ್ಬಂದಿಗೆ ಜನಸಂದಣಿಯನ್ನು ನಿಯಂತ್ರಿಸುವುದು ಕಷ್ಟವಾಯಿತು.
ಕೆಲ ಹೊತ್ತು ಅಸ್ತವ್ಯಸ್ತತೆ ಉಂಟಾದರೂ, ವಿರಾಟ್ ತಾಳ್ಮೆಯಿಂದ ನಡೆದುಕೊಂಡು ಕೆಲವು ಅಭಿಮಾನಿಗಳೊಂದಿಗೆ ಫೋಟೋಗೆ ಪೋಸ್ ನೀಡಿ ಬಳಿಕ ಕಾರಿನಲ್ಲಿ ಹೊರಟರು. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.



