ಎಲ್ಲರ ಸಹಕಾರದಿಂದ ಉತ್ತಮ ಆಡಳಿತ : ವೈಶಾಲಿ ಎಂ.ಎಲ್.

0
Farewell to former DC Vaishali ML and welcome new DC Govindarreddy
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲೆಗೆ ಪ್ರಥಮ ಬಾರಿ ಜಿಲ್ಲಾಧಿಕಾರಿಯಾಗಿ ಆಗಮಿಸಿದಾಗ ಹಲವಾರು ಸವಾಲುಗಳು ಎದುರಾದರೂ ಅವುಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಸಮರ್ಥವಾಗಿ ಎದುರಿಸಲಾಯಿತು ಎಂದು ನಿಕಟಪೂರ್ವ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಹೇಳಿದರು.

Advertisement

ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜರುಗಿದ ನಿಕಟಪೂರ್ವ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರಿಗೆ ಬೀಳ್ಕೊಡುಗೆ ಹಾಗೂ ನೂತನವಾಗಿ ಜಿಲ್ಲಾಧಿಕಾರಿಗಳಾಗಿ ಆಗಮಿಸಿದ ಗೋವಿಂದರೆಡ್ಡಿ ಅವರಿಗೆ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

ಗದಗ ಜಿಲ್ಲೆಗೆ ಆಗಮಿಸಿದ ನಂತರ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳನ್ನು ಮತ್ತು ಉತ್ಸವಗಳನ್ನು ಅತ್ಯಂತ ಯಶಸ್ವಿಯಾಗಿ ತಮ್ಮೆಲ್ಲರ ಸಹಕಾರದಿಂದ ನಿಭಾಯಿಸಿದ ಸಂತಸ ನನಗಿದೆ. ಒಬ್ಬರೇ ಕೆಲಸ ಮಾಡುವುದಕ್ಕಿಂತ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಗದಗ ಜಿಲ್ಲೆಯನ್ನು ರಾಜ್ಯದ ವಿವಿಧ ಜಿಲ್ಲೆಗಳಿಗಿಂತ ಉತ್ತಮ ಪ್ರಗತಿಯಲ್ಲಿರುವುದಕ್ಕೆ ನೋಡಿಕೊಳ್ಳುವುದಕ್ಕೆ ಕಾರಣವಾಯಿತು. ಪ್ರಗತಿ ಪರಿಶೀಲನೆ ನಡೆಸುವಾಗ ಪ್ರಗತಿ ಸಾಧಿಸದ ಅಧಿಕಾರಿಗಳಿಗೆ ಕೋಪದಿಂದ ಬೈದದ್ದು ಉಂಟು. ಆ ಕೋಪ ಕೇವಲ ಕೆಲಸಕ್ಕೆ ಮಾತ್ರ ಸೀಮಿತ. ವೈಯಕ್ತಿಕವಾಗಿ ಯಾವುದೇ ತರಹದ ದ್ವೇಷ ಇಲ್ಲ. ಜಿಲ್ಲೆಯಲ್ಲಿ ಎರಡು ವರ್ಷ ಕೆಲಸ ಮಾಡಲು ಸಹಕಾರ ನೀಡಿದ ಎಲ್ಲ ನೌಕರರಿಗೂ, ಸಾರ್ವಜನಿಕರಿಗೂ, ರಾಜಕೀಯ ಪ್ರತಿನಿಧಿಗಳಿಗೂ ಧನ್ಯವಾದಗಳು ಎಂದರು.

Farewell to former DC Vaishali ML and welcome new DC Govindarreddy

ನೂತನ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ನಿರ್ಗಮಿತ ಜಿಲ್ಲಾಧಿಕಾರಿಗಳಾದ ವೈಶಾಲಿ ಎಂ.ಎಲ್ ಅವರು ಉತ್ತಮ ಆಡಳಿತಗಾರರು. ಗದಗ ಜಿಲ್ಲೆಯನ್ನು ಕಂದಾಯ ವಿಷಯ ಸೇರಿದಂತೆ ಹಲವಾರು ವಿಷಯಗಳಲ್ಲಿ ಉತ್ತಮ ಸ್ಥಾನದಲ್ಲಿರುವಂತೆ ನೋಡಿಕೊಂಡಿದ್ದಾರೆ. ಅಪಾರ ಆಡಳಿತದ ಅನುಭವ ಹೊಂದಿದ ಅವರು ಯಾವುದೇ ಹುದ್ದೆ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಉತ್ತಮ ಪ್ರಗತಿ ಸಾಧಿಸುವ ಛಲ ಹೊಂದಿದವರು. ಜಿಲ್ಲೆಯ ಜನತೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಅವರು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿರುವುದು ಜಿಲ್ಲೆಗೆ ಸಹಕಾರಿಯಾಗಲಿದೆ ಎಂದರು.

ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಮಾತನಾಡಿ, ಅಲ್ಪ ಸಮಯದಲ್ಲಿಯೇ ಲೋಕಸಭಾ ಚುನಾವಣೆಯನ್ನು ವೈಶಾಲಿ ಎಂ.ಎಲ್. ಅವರೊಂದಿಗೆ ನಿರ್ವಹಿಸಿರುವುದು ಸಂತಸ ತಂದಿದೆ. ಅವರ ನೇತೃತ್ವದಲ್ಲಿ ಕಂದಾಯ ಇಲಾಖೆ ಜಿಲ್ಲೆಯಲ್ಲಿ ಉತ್ತಮ ಕಾರ್ಯಗಳನ್ನು ಮಾಡಿದೆ. ಅವರು ಇನ್ನೂ ಉತ್ತಮ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲಿ ಎಂದು ಹಾರೈಸಿದರು.

ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ. ಪಲ್ಲೇದ, ತಹಸೀಲ್ದಾರರು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಸೇರಿದಂತೆ ವಿವಿಧ ಅಧಿಕಾರಿ, ನೌಕರರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಹಾಗೂ ನೂತನ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರುಗಳಿಗೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ನೌಕರರಿಗೆ ವರ್ಗಾವಣೆ ಎನ್ನುವುದು ಸರ್ವೇ ಸಾಮಾನ್ಯ. ನನಗೆ ಹಿರಿಯ ಸಹೋದರಿಯಾಗಿ ವೈಶಾಲಿ ಎಂ.ಎಲ್ ಅವರು ನನ್ನ ಬೆಂಬಲಕ್ಕೆ ನಿಲ್ಲುವ ಮೂಲಕ ಉತ್ತಮ ಕಾರ್ಯಗಳನ್ನು ಮಾಡಲು ಸಹಕಾರಿಯಾಗಿದ್ದರು. ಜಿಲ್ಲಾಧಿಕಾರಿಗಳಾಗಿ ಆಗಮಿಸಿದ ಗೋವಿಂದರೆಡ್ಡಿ ಅವರು ಧಾರವಾಡದಲ್ಲಿ ಅಭ್ಯಸಿಸಿದ ವಿಷಯದಲ್ಲಿಯೇ ನಾನೂ ಮತ್ತು ಅವರು ಚಿನ್ನದ ಪದಕ ಪಡೆದವರಾಗಿದ್ದು, ಈ ಹಿಂದೆ ಅವರೊಂದಿಗೆ ಕೆಲಸ ಮಾಡಿದ್ದೇನೆ ಎಂದು ನೆನೆದರು.


Spread the love

LEAVE A REPLY

Please enter your comment!
Please enter your name here