ವಿಜಯಸಾಕ್ಷಿ ಸುದ್ದಿ, ರೋಣ : ತಾಲೂಕಿನ ಮುಗಳಿ ಗ್ರಾಮದಲ್ಲಿ ಎಸ್‌ಬಿಐ ವತಿಯಿಂದ ರೀಜನಲ್ ಮ್ಯಾನೇಜರ್ ನಾಗಸುಬ್ಬಾ ರೆಡ್ಡಿ ಇವರ ಮಾರ್ಗದರ್ಶನದಲ್ಲಿ ರೈತ ಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಬ್ಯಾಂಕ್ ಅಧಿಕಾರಿ ಶಿವಾನಂದ ಬ್ಯಾಂಕಿನ ವಿವಿಧ ಸಾಲ ಯೋಜನೆಗಳಾದ ಮುದ್ರಾ, ಸ್ಟಾರ್ಟಪ್ ಸಾಲಗಳ ಬಗ್ಗೆ ವಿವರವಾಗಿ ತಿಳಿಸಿದರು. ನಾಗರಾಜ ಬೆಳೆಸಾಲದ ಬಗ್ಗೆ ವಿವರವಾಗಿ ತಿಳಿಸಿ, ಅವಧಿ ಪೂರ್ವ ಸಾಲ ಮರುಪಾವತಿ ಮಾಡಿದರೆ ಕೇಂದ್ರ ಸರ್ಕಾರದಿಂದ ಶೇ. 3ರಷ್ಟು ಬಡ್ಡಿ ಸಹಾಯಧನ ಸಿಗುವುದು. ಇದರ ಪ್ರಯೋಜನವನ್ನು ರೈತ ಬಾಂಧವರು ಪಡೆದುಕೊಳ್ಳಬೇಕು. ಬೆಳೆಸಾಲ ಪಡೆದ ರೈತರು ಬೆಳೆವಿಮೆ ಮಾಡಿಸಿ ಪ್ರಯೋಜನ ಪಡೆಯಲು ತಿಳಿಸಿದರು.
ಆರ್ಥಿಕ ಸಾಕ್ಷರತಾ ಸಲಹೆಗಾರ ಮಲ್ಲಿಕಾರ್ಜುನ ಕುಲಕರ್ಣಿ ಸಾಮಾಜಿಕ ಸುರಕ್ಷತಾ ಯೋಜನೆಗಳಾದ ಪ್ರದಾನಮಂತ್ರಿ ಜನಧನ, ಪ್ರದಾನಮಂತ್ರಿ ಜೀವನ ಜ್ಯೋತಿ, ಪ್ರದಾನಮಂತ್ರಿ ಜೀವನ ಸುರಕ್ಷಾ ಹಾಗೂ ಅಟಲ್ ಪೆನ್ಷನ್ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಸಿದರು. ಬಿ.ಕೆ. ಮರಡ್ಡಿ ಸ್ವಾಗತಿಸಿ ಸಭೆ ನಿರ್ವಹಿಸಿದರು.