ವಿಜಯಸಾಕ್ಷಿ ಸುದ್ದಿ, ಗದಗ: ಭಾರತ ಸರಕಾರದ ಜಲ ಶಕ್ತಿ ಸಚಿವಾಲಯದ ಅಡಿಯಲ್ಲಿನ ಕೇಂದ್ರೀಯ ಅಂತರ್ಜಲ ಮಂಡಳಿ ಹಾಗೂ ಐ.ಸಿ.ಎ.ಆರ್–ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಇವರ ಸಂಯುಕ್ತ ಆಶ್ರಯದಲ್ಲಿ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ದ ಕುರಿತು ಒಂದು ದಿನದ ಸಾರ್ವಜನಿಕ ಸಂವಹನ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಸಿ.ಜಿ.ಡಬ್ಲ್ಯೂ.ಬಿ. ನೈಋತ್ಯ ವಲಯದ ಪ್ರಾದೇಶಿಕ ನಿರ್ದೇಶಕ ಜಿ. ಕೃಷ್ಣಮೂರ್ತಿ, ವಿಜ್ಞಾನಿಗಳಾದ ಎಚ್.ಪಿ. ಜಯಪ್ರಕಾಶ್, ಡಾ. ಜೆ. ದೇವಿತುರಾಜ್ ಮತ್ತು ಸಂಗೀತಾ ಪಿ. ಭಟ್ಟಾಚಾರ್ಯಜಿ ಇವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.
ಐ.ಸಿ.ಎ.ಆರ್–ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಸುಧಾ ವಿ. ಮಂಕಣಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗೌರವ ಅತಿಥಿಯಾಗಿ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಲೋಕೇಶ್ ಭಾಗವಹಿಸಿದ್ದರು.
ಕೇಂದ್ರೀಯ ಅಂತರ್ಜಲ ಮಂಡಳಿ, ನೈಋತ್ಯ ವಲಯದ ವಿಜ್ಞಾನಿ ಎಚ್.ಪಿ. ಜಯಪ್ರಕಾಶ್ ಮಾತನಾಡಿ, ದೇಶದ ಆರ್ಥಿಕತೆಯನ್ನು ರೂಪಿಸುವಲ್ಲಿ ರೈತರು ಪ್ರಮುಖರು. ರೈತರು ಅಂತರ್ಜಲದ ಪ್ರಾಥಮಿಕ ಗ್ರಾಹಕರಲ್ಲದೇ, ಅವರಿಗೆ ಸರಿಯಾದ ವೈಜ್ಞಾನಿಕ ಮಾರ್ಗದರ್ಶನ ನೀಡಿದರೆ ಜಲ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಸುಸ್ಥಿರ ಅಂತರ್ಜಲ ನಿರ್ವಹಣೆಯಾಗಬೇಕಾದರೆ, ರೈತರಿಗೆ ಅಂತರ್ಜಲದ ಪ್ರಾಮುಖ್ಯತೆಯ ಕುರಿತು ತರಬೇತಿಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಕೇಂದ್ರೀಯ ಅಂತರ್ಜಲ ಮಂಡಳಿ, ನೈಋತ್ಯ ವಲಯದ ನಿರ್ದೇಶಕರಾದ ಜಿ. ಕೃಷ್ಣಮೂರ್ತಿ ಮಾತನಾಡಿ, ನಮ್ಮ ದೇಶದಲ್ಲಿ ನೀರಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜಲ ಸಂಪನ್ಮೂಲದ ಮೌಲ್ಯಮಾಪನ, ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುವ ಮೂಲಕ ವೈಜ್ಞಾನಿಕ ಅಂತರ್ಜಲ ನಿರ್ವಹಣೆಗೆ ಮಂಡಳಿಯ ಬದ್ಧತೆಯನ್ನು ತಿಳಿಸಿದರಲ್ಲದೇ, ರಾಷ್ಟ್ರೀಯ ಜಲಚರ ನಕ್ಷೆ ಮತ್ತು ನಿರ್ವಹಣಾ ಕಾರ್ಯಕ್ರಮದ ಅಡಿಯಲ್ಲಿನ ಉಪಕ್ರಮಗಳನ್ನು ವಿವರಿಸಿದರು.
ಡಾ. ಲೋಕೇಶ್ ಐ.ಒ.ಟಿ. ಮತ್ತು ಸೆನ್ಸರ್ ಆಧಾರಿತ ಕೃಷಿ ಉಪಕರಣಗಳ ಕ್ಷೇತ್ರದಲ್ಲಿನ ಇತ್ತೀಚಿನ ಪ್ರಗತಿಗಳ ಬಗ್ಗೆ ಮಾಹಿತಿ ನೀಡಿ, ಇದನ್ನು ಗ್ರಾಮ ಮಟ್ಟದಲ್ಲಿ ಪರಿಚಯಿಸಿದರೆ ಯುವ ರೈತರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದು ಹೇಳಿದರು.
ಗದಗ ಜಿಲ್ಲೆಯಲ್ಲಿ ಒಂಕಿಯುಐಒ ಅಧ್ಯಯನಗಳು, ಜಲ ಸಂಪನ್ಮೂಲಗಳ ಸಂರಕ್ಷಣೆ, ಕೃಷಿ ವಲಯದಲ್ಲಿ ಅಭಿವೃದ್ಧಿ ಮತ್ತು ನೀರಿನ ಸರಿಯಾದ ಬಳಕೆ ಮತ್ತು ಅಂತರ್ಜಲ ಮರುಪೂರಣಕ್ಕಾಗಿ ತಂತ್ರಜ್ಞಾನಗಳ ಮೂಲಕ ವಿವಿಧ ವಿಷಯಗಳ ಕುರಿತು ಎಚ್.ಪಿ. ಜಯಪ್ರಕಾಶ್, ಪ್ರೊ. ಲೋಕೇಶ್ ಮತ್ತು ಎನ್.ಎಚ್. ಭಂಡಿ ಇವರು ತಾಂತ್ರಿಕ ಉಪನ್ಯಾಸಗಳನ್ನು ನೀಡಿದರು.
ಡಾ. ಸುಧಾ ವಿ. ಮಂಕಣಿ ಮಾತನಾಡಿ, ಗದಗ ಜಿಲ್ಲೆಯ ಅಂತರ್ಜಲ ನಿರ್ವಹಣೆ ಕ್ಷೇತ್ರದಲ್ಲಿ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ ಪಾತ್ರವನ್ನು ವಿವರಿಸಿ, ಕೃಷಿ ವಿಜ್ಞಾನ ಕೇಂದ್ರವು ರೈತರ ತರಬೇತಿಗಳ ಮೂಲಕ ನೀರಿನ ಸದ್ಬಳಕೆ ಕುರಿತು ಜಾಗೃತಿ ಮೂಡಿಸುತ್ತಿದೆ ಎಂದರಲ್ಲದೇ, ಈ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದಕ್ಕಾಗಿ ಕೇಂದ್ರ ಅಂತರ್ಜಲ ಮಂಡಳಿಯ ಪ್ರಯತ್ನಗಳನ್ನು ಶ್ಲಾಘಿಸಿದರು.