ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ರೈತ ಸಂಘದಿಂದ ಮನವಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಈ ವರ್ಷದ ಅತಿವೃಷ್ಟಿಗೆ ಮುಂಗಾರು ಬೆಳೆಗಳೆಲ್ಲ ಹಾಳಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಬೆಳೆ ಹಾನಿ, ಬೆಳೆ ವಿಮೆ ಪರಿಹಾರ ಸಿಗಬೇಕು, ಬೆಂಬಲ ಬೆಲೆ ವ್ಯವಸ್ಥೆ ಕಲ್ಪಿಸಬೇಕು ಮತ್ತು ರೈತರ ಸಾಲ ಮನ್ನಾ ಆಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆದು ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಬುಧವಾರ ಲಕ್ಷ್ಮೇಶ್ವರದಲ್ಲಿ ಮಾಜಿ ಸಿಎಂ ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ ಅವರಿಗೆ ರೈತರು ಮನವಿ ಸಲ್ಲಿಸಿದರು.

Advertisement

ಈ ವೇಳೆ ಹಿರಿಯ ರೈತರಾದ ಎಸ್.ಪಿ. ಪಾಟೀಲ ಮಾತನಾಡಿ, ಮುಂಗಾರಿನ ಪ್ರಮುಖ ಬೆಳೆ ಹೆಸರು ಸಂಪೂರ್ಣ ಹಾಳಾಗಿವೆ. ಅಳಿದುಳಿದ ಬೆಳೆಗೂ ಬೆಲೆ ಇಲ್ಲದಂತಾಗಿದೆ. ಇದೀಗ ಈರುಳ್ಳಿ ಬೆಳೆಯೂ ಹಾಳಾಗಿದ್ದು, ಬೆಲೆಯೂ ಇಲ್ಲದಂತಾಗಿದೆ. ರೈತರು ಕಷ್ಟಪಟ್ಟು ಬೆಳೆದ ಎಲ್ಲ ಬೆಳೆಗಳು ಎಂಎಸ್‌ಪಿಗೆತ ಕಡಿಮೆ ದರದಲ್ಲಿ ಮಾರಾಟವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಕಾರಣ ಬೆಂಬಲ ಬೆಲೆಯಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸಲು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು. ಸರ್ಕಾರದಿಂದ ರೈತರ ಸಾಲ ಮನ್ನಾ ಆಗಬೇಕು. ಪ್ರತಿ ಎಕರೆಗೆ 30 ಸಾವಿರ ರೂ ಬೆಳೆ ಹಾನಿ ಪರಿಹಾರ ಸಿಗಬೇಕು ಎಂದು ಆಗ್ರಹಿಸಿದರು.

ಕೃಷಿಕ ಸಮಾಜ (ದೆಹಲಿ)ಯ ತಾಲೂಕು ಘಟಕದ ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಮಾತನಾಡಿ, 2019 ರಿಂದ ಇಲ್ಲಿಯವರೆಗೆ ಕಿಸಾನ್ ಸಮ್ಮಾನ ಯೋಜನೆಯ ಹೊಸ ಫಲಾನುಭವಿಯಾದ ರೈತರಿಗೆ ಅವಕಾಶ ದೊರೆತಿಲ್ಲ. 2025ರಲ್ಲಿ ನೋಂದಾಯಿಸಿಕೊಂಡ ರೈತರಿಗೂ ಈ ಯೋಜನೆ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರು ರೈತರ ಪರವಾದ ಎಲ್ಲ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಈ ವೇಳೆ ರೈತರಾದ ವಿರೂಪಾಕ್ಷಪ್ಪ ಆದಿ, ಬಸವರಾಜ ಮೆಣಸಿನಕಾಯಿ, ಉಮೇಶ ಚಿಕ್ಕಣ್ಣವರ, ಲಕ್ಷ್ಮೇಶ್ವರ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ, ಈರಣ್ಣ ಆದಿ, ಬಸವರಾಜ ಜಾಲಗಾರ, ಅಭಯ ಜೈನ್, ಹೊನ್ನಪ್ಪ ವಡ್ಡರ, ಚಂದ್ರು ಮಾಗಡಿ, ಪರಶುರಾಮ ಮೈಲಾರಿ, ಈರಪಣ್ಣ ಮರಳಿಹಳ್ಳಿ, ನಾಗಯ್ಯ ಮಠಪತಿ, ಮುತ್ತು ನಿರಲಗಿ, ಮಲ್ಲಿಕಾರ್ಜುನ ನೀರಾಲೋಟಿ, ಮುತ್ತಣ್ಣಶೆಟ್ಟರ ವಡಕಣ್ಣವರ, ಜಿ.ಪಿ. ಮಾಡಳ್ಳಿ, ವಿರೂಪಾಕ್ಷಪ್ಪ ವಡಕಣ್ಣವರ, ರುದ್ರಪ್ಪ ಚಾಕಲಬ್ಬಿ, ಜಿ.ಆರ್. ಪಾಟೀಲ ಸೇರಿ ತಾಲೂಕಾ ಕೃಷಿಕ ಸಮಾಜ (ದೆಹಲಿ) ಹಾಗೂ ಕರ್ನಾಟಕ ರಾಜ್ಯ ರೈತ ಸಂಘಟನೆ ಸದಸ್ಯರು ಇದ್ದರು.

ಇದೇ ಸಂದರ್ಭದಲ್ಲಿ ಪಟ್ಟಣದ ಮುಖಂಡರು ಪಾಳಾ-ಬಾದಾಮಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಮನವಿ ಸಲ್ಲಿಸಿದಲ್ಲದೆ, ಲಕ್ಷ್ಮೇಶ್ವರದ ಕಾಳಿಕಾದೇವಿ ಸಮುದಾಯ ಭವನ ಹಾಗೂ ಜೀರ್ಣೋದ್ಧಾರ ಸಮಿತಿ ಸದಸ್ಯರು ಇತಿಹಾಸ ಪ್ರಸಿದ್ಧ ಕಾಳಿಕಾದೇವಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕು ಎಂದು ಮನವಿ ಸಲ್ಲಿಸಿದರು.


Spread the love

LEAVE A REPLY

Please enter your comment!
Please enter your name here