ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರೈತರ ಬದುಕಿಗೆ ಆಸರೆಯಾದ ಭೂಮಿತಾಯಿಗೆ ಉಡಿ ತುಂಬುವ ಸಾಂಪ್ರದಾಯಿಕ ಸೀಗಿ ಹುಣ್ಣಿಮೆ ಹಬ್ಬವನ್ನು ರೈತರು ಮಂಗಳವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಮುಂಗಾರಿನ ಬೆಳೆಗಳ ಫಸಲು ಪಡೆದು ಹಿಂಗಾರಿನಲ್ಲಿ ಬಿತ್ತನೆ ಸಂದರ್ಭದಲ್ಲಿ ಉತ್ತಮ ಬೆಳೆ ಬರಲೆಂದು ಭೂತಾಯಿಗೆ ಉಡಿ ತುಂಬಿ ಚರಗ ಚೆಲ್ಲಿ ಬೀಗರು, ಆತ್ಮೀಯರೊಡಗೂಡಿ ಸಹಪಂಕ್ತಿ ಭೋಜನದೊಂದಿಗೆ ಸೀಗಿ ಹುಣ್ಣಿಮೆ ಹಬ್ಬ ಆಚರಿಸುವುದು ಸಂಪ್ರದಾಯ. ಹಬ್ಬದ ದಿನ ಸಿಂಗರಿಸಿದ ಎತ್ತಿನ ಚಕ್ಕಡಿ, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳ ಮೂಲಕ ಹೊಲಕ್ಕೆ ತೆರಳಿ ಬನ್ನಿಗಿಡದ ಕೆಳಗಿರುವ ಪಾಂಡವರ ಕಲ್ಲುಗಳನ್ನು ಪೂಜಿಸುತ್ತಾರೆ. ನಂತರ ಭೂಮಿತಾಯಿಗೆ ಉಡಿ ತುಂಬಿ ತಯಾರಿಸಿದ ಪುಂಡಿಪಲ್ಲೆ, ಉಂಡಗಡುಬು ಇತರೇ ಸಾಂಪ್ರದಾಯಿಕ ಪದಾರ್ಥಗಳ ಪ್ರಸಾದ ಚರಗ ಚೆಲ್ಲುವ ಸಂಪ್ರದಾಯವೇ ಸೀಗಿ ಹುಣ್ಣಿಮೆ.
ಈ ವರ್ಷ ಅತಿವೃಷ್ಟಿ ಮತ್ತೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಆದರೆ, ಸಂಪ್ರದಾಯವನ್ನು ಬಿಡದೆ ಆಚರಣೆ ಮಾಡಬೇಕಾದ ಹಿನ್ನೆಲೆಯಲ್ಲಿ ಸೀಗಿ ಹುಣ್ಣಿಮೆಯನ್ನು ಆಚರಿಸುತ್ತಿದ್ದೇವೆ. ಮುಂಗಾರು ಬೆಳೆ ರೈತರನ್ನು ನಿರಾಸೆಗೊಳಿಸಿದ್ದು, ಹಿಂಗಾರು ಮಳೆ-ಬೆಳೆ ಉತ್ತಮವಾಗಿ ಆಗಬಹುದು ಎನ್ನುವ ಆಸೆಯನ್ನು ರೈತ ಸಮುದಾಯ ಹೊಂದಿದೆ ಎನ್ನುತ್ತಾರೆ ರೈತರಾದ ಬಸವರಾಜ ಮೆಣಸಿನಕಾಯಿ, ನಾಗರಾಜ ಪೂಜಾರ (ಸೂರಣಗಿ), ಅಶೋಕಪ್ಪ ಸೊರಟೂರ (ಗೊಜನೂರು).



