ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಉತ್ತರ ಕರ್ನಾಟಕದ ರೈತರ ಪ್ರಮುಖ ಹಬ್ಬಗಳಲ್ಲಿ ಒಂದಾದ ಎಳ್ಳ ಅಮವಾಸ್ಯೆಯನ್ನು ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಸಕ್ತ ವರ್ಷ ಶುಕ್ರವಾರ ಎಳ್ಳ ಅಮವಾಸ್ಯೆಯನ್ನು ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು.
ನರೇಗಲ್ಲ, ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ಮಲ್ಲಾಪೂರ, ದ್ಯಾಂಪೂರ, ಜಕ್ಕಲಿ, ಬೂದಿಹಾಳ, ಮಾರನಬಸರಿ, ಕಳಕಾಪೂರ, ಹೊಸಳ್ಳಿ, ನಿಡಗುಂದಿ, ನಿಡಗುಂದಿಕೊಪ್ಪ, ಹಾಲಕೆರೆ ಸೇರಿದಂತೆ ಹೋಬಳಿಯಾದ್ಯಂತ ಶುಕ್ರವಾರ ಭೂತಾಯಿಗೆ ಚರಗ ಚೆಲ್ಲುವ ಮೂಲಕ ರೈತರು ಭೂತಾಯಿಯನ್ನು ಪೂಜಿಸಿದರು.
ಹೊಲದಲ್ಲಿ ಬೆಳೆದ ಹಿಂಗಾರು ಪೈರುಗಳ ನಡುವೆ ಬನ್ನಿಮರವನ್ನು ಹುಡುಕಿ ಅದಕ್ಕೆ ಪೂಜೆ ಮಾಡಿ ಭೂಮಿತಾಯಿಗೆ ಚರಗ ಚೆಲ್ಲುವುದು ಈ ಹಬ್ಬದ ವಿಶೇಷವಾಗಿದೆ. ಭೂಮಿ ತಾಯಿಗೆ ಪೂಜೆ ಮಾಡಿ ಮನೆಗಳಿಂದ ತೆಗೆದುಕೊಂಡು ಹೋದ ಆಹಾರವನ್ನು ಇಡೀ ಹೊಲದ ತುಂಬೆಲ್ಲ ಚೆಲ್ಲುವ ದೃಶ್ಯ ಸಾಮಾನ್ಯವಾಗಿತ್ತು.
ಈ ಹಿಂದೆ ಸಾವಿರಾರು ಎತ್ತು ಬಂಡಿಗಳಲ್ಲಿ ರೈತಾಪಿ ವರ್ಗ ಹೊಲಗಳಿಗೆ ಚರಗ ಚೆಲ್ಲಲು ಹೋಗುತ್ತಿದ್ದರು. ಆದರೆ, ಈಗ ಟ್ರ್ಯಾಕ್ಟರ್‌ಗಳ ಹಾವಳಿಯಿಂದಾಗಿ ಬೆರಳೆಣಿಕೆಯಷ್ಟು ಮಾತ್ರ ಚಕ್ಕಡಿಗಳು ಕಂಡುಬಂದವು. ಈ ಚರಗ ಚೆಲ್ಲುವ ಪದ್ಧತಿ ಪುರಾತನ ಕಾಲದ್ದಾದರೂ ವೈಜ್ಞಾನಿಕ ಹಿನ್ನೆಲೆಯನ್ನೂ ಹೊಂದಿದೆ.
ಪುರಾತನ ಕಾಲದಿಂದ ಗ್ರಾಮೀಣ ಜನರು ಕೃಷಿಗೆ ಸಂಬಂಧಿಸಿದಂತೆ ಆಚರಿಸಿಕೊಂಡು ಬಂದಿರುವ ಹಬ್ಬ-ಹರಿದಿನಗಳು ಅತ್ಯಂತ ವೈಜ್ಞಾನಿಕವಾಗಿದೆ. ಅವುಗಳನ್ನು ಮುಂದುವರಿಸಿಕೊಂಡು ಹೋಗಬೇಕಾದ ಅಗತ್ಯವೂ ಇದೆ ಎಂದು ಕೋಟುಮಚಗಿಯ ಸಾವಯವ ಕೃಷಿಕ ವೀರೇಶ ನೇಗಲಿ ಅಭಿಪ್ರಾಯಪಟ್ಟರು.



